ಬೆಂಗಳೂರು: ‘ಕೇಂದ್ರ ಸರ್ಕಾರವು ಜಾತಿಗಣತಿಯ ಜತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯ ಸಮೀಕ್ಷೆಯನ್ನೂ ನಡೆಸಬೇಕು’ ಎಂದು ಪ್ರೊ.ರವಿವರ್ಮಕುಮಾರ್ ಅವರು ಒತ್ತಾಯಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಸಮೀಕ್ಷೆಗೆ ಕರ್ನಾಟಕವು ಈಗಾಗಲೇ ಮುನ್ನುಡಿ ಬರೆದಿದೆ. ಅದನ್ನೇ ಮಾದರಿಯಾಗಿ ಇರಿಸಿಕೊಂಡು ಕೇಂದ್ರವೂ ಸಾಮಾಜಿಕ ಸಮೀಕ್ಷೆ ನಡೆಸಬೇಕು’ ಎಂದರು.
‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಗೆ ಸುಪ್ರೀಂ ಕೋರ್ಟ್ ಶೇ 50ರ ಮಿತಿ ಹೇರಿದೆ. ಈ ಮಿತಿಯನ್ನು ಹೆಚ್ಚಿಸಿ ಎಂದು ಕೋರಿದಾಗಲೆಲ್ಲಾ ಸುಪ್ರೀಂ ಕೋರ್ಟ್, ವೈಜ್ಞಾನಿಕವಾಗಿ ಸಂಗ್ರಹಿಸಿದ ದತ್ತಾಂಶ ನೀಡಿ ಎಂದು ಕೇಳುತ್ತಿತ್ತು. ಜಾತಿಗಣತಿ ಜತೆಗೆ ಸಾಮಾಜಿಕ ಸಮೀಕ್ಷೆಯನ್ನೂ ನಡೆಸಿದರೆ, ಈ ಸಮಸ್ಯೆ ಬಗೆಹರಿಯಲಿದೆ’ ಎಂದರು.
‘ಜಾತಿಗಣತಿ ಮತ್ತು ಸಾಮಾಜಿಕ ಸಮೀಕ್ಷೆಯ ದತ್ತಾಂಶಗಳನ್ನು ಇರಿಸಿಕೊಂಡು ಮೀಸಲಾತಿಗೆ ಇರುವ ಶೇ 50ರ ಮಿತಿಯನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಕಾಲಮಿತಿಯಲ್ಲಿ ಗಣತಿ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ‘ರಾಜ್ಯದಲ್ಲಿ ಕಾಂತರಾಜು ಆಯೋಗ ಮತ್ತು ಜಯಪ್ರಕಾಶ ಹೆಗ್ಡೆ ಆಯೋಗದ ವರದಿಗಳನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಅದರಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಬೇಕು. ವರದಿಯ ಶಿಫಾರಸುಗಳನ್ನು ಶೀಘ್ರವೇ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
‘ದೇಶದಾದ್ಯಂತ ಜಾತಿಗಣತಿ ನಡೆಸಬೇಕು ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಒತ್ತಾಯಿಸುತ್ತಲೇ ಇದ್ದರು. ಕೇಂದ್ರ ಸರ್ಕಾರ ಈಗ ಆ ಕೆಲಸಕ್ಕೆ ಮುಂದಾಗಿದೆ. ಜಾತಿಗಣತಿಯನ್ನು ವಿರೋಧಿಸುತ್ತಿದ್ದ ಬಿಜೆಪಿ, ಈಗ ಅದರ ಮಹತ್ವವನ್ನು ಅರ್ಥಮಾಡಿಕೊಂಡಿದೆ ಎಂದು ಭಾವಿಸಿದ್ದೇವೆ’ ಎಂದರು.
ಒಕ್ಕೂಟದ ಪ್ರಮುಖರಾದ ಮಾವಳ್ಳಿ ಶಂಕರ್, ಬಿ.ಟಿ. ಲಲಿತಾನಾಯಕ್, ಅನಂತ ನಾಯ್ಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.