ಬೆಂಗಳೂರು: ಕೇಂದ್ರ ಸರ್ಕಾರವು ಜನಗಣತಿಯೊಂದಿಗೆ ನಡೆಸಲಿರುವ ಜಾತಿಗಣತಿ ಮತ್ತು ಕರ್ನಾಟಕ ಸರ್ಕಾರ ನಡೆಸಲಿರುವ ಸಾಮಾಜಿಕ. ಶೈಕ್ಷಣಿಕ ಸಮೀಕ್ಷೆ ಎರಡೂ ಒಂದೇ ಅಲ್ಲ. ಇವುಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ ಎಂದು ಅಂಕಣಕಾರ ಎ. ನಾರಾಯಣ ತಿಳಿಸಿದರು.
ದೇವರಾಜ ಅರಸು ಜನ್ಮ ದಿನಾಚರಣೆಯ ಪ್ರಯುಕ್ತ ಜಾಗೃತ ಕರ್ನಾಟಕ ಶನಿವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2: ಈಡೇರಿತೇ ಸರ್ವ ಸಮುದಾಯಗಳ ನಿರೀಕ್ಷೆ?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ನಡೆಯುವ ಸಮೀಕ್ಷೆ ಕೇವಲ ತಲೆ ಎಣಿಕೆಯಲ್ಲ. ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯುವ ಪ್ರಕ್ರಿಯೆ. ಜಾತಿ ಸಮುದಾಯಗಳ ಸ್ಥಿತಿಗತಿ ಅರಿಯವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರದ ಯೋಜನೆಗಳು ರಾಜ್ಯ ಸರ್ಕಾರ ಕಳುಹಿಸಿಕೊಡುವ ಜಾತಿ ವಿವರಗಳನ್ನೇ ಆಧರಿಸಿದೆ’ ಎಂದು ಹೇಳಿದರು.
‘ಮೊದಲ ಸಮೀಕ್ಷೆಗೆ ಸಂಬಂಧಿಸಿದಂತೆ ವಿವಾದ ಇರುವುದೇ ಸಂಖ್ಯೆ ಕಡಿಮೆ ತೋರಿಸಿದ್ದಾರೆ ಎಂಬುದು. ಸಮೀಕ್ಷೆ ವೈಜ್ಞಾನಿಕವಾಗಿ ನಡೆಯಬೇಕು. ಸಂಖ್ಯೆ ನಿಖರವಾಗಿರಬೇಕು. ಆದರೆ, ಸಂಖ್ಯೆಯಷ್ಟೇ ಸೌಲಭ್ಯ, ಪ್ರಾತಿನಿಧ್ಯ ಪಡೆಯುವ ಮಾನದಂಡವಲ್ಲ. ಸಾಮಾಜಿಕ ನ್ಯಾಯ ಎಂದರೆ, ಇಲ್ಲಿವರೆಗೆ ಯಾವ ಸಮುದಾಯ ಸೌಲಭ್ಯ ಪಡೆದಿದೆ, ಯಾವ ಸಮುದಾಯಕ್ಕೆ ದೊರೆತಿಲ್ಲ ಎಂದು ನೋಡಿ ಸೌಲಭ್ಯ ವಂಚಿತರಿಗೆ ಆದ್ಯತೆ ನೀಡುವುದು’ ಎಂದು ತಿಳಿಸಿದರು.
‘ಎಲ್ಲಿವರೆಗೆ ಸಾಮಾಜಿಕ ನ್ಯಾಯ ಜಾರಿ ಮಾಡಲು ಅದರ ವಿರುದ್ಧ ಇರುವವರ ಬೆಂಬಲ ಪಡೆಯುವ ಪರಿಸ್ಥಿತಿ ಇರುತ್ತದೆಯೋ ಅಲ್ಲಿವರೆಗೆ ಬದಲಾವಣೆ ಆಗುವುದಿಲ್ಲ. ಸಾಮಾಜಿಕ ನ್ಯಾಯದ ರಥವನ್ನು ಒಂದು ಅಂಗುಲ ಮುಂದಕ್ಕೆ ಒಯ್ದರೆ ವಿರೋಧಿಗಳು ಎರಡು ಅಂಗುಲ ಹಿಂದಕ್ಕೆ ಎಳೆಯುವುದು ಮುಂದುವರಿಯಲಿದೆ. ಸಾಮಾಜಿಕ ನ್ಯಾಯದ ಪರ ಇರುವ ಶಕ್ತಿಗಳೆಲ್ಲ ಒಂದಾಗಬೇಕು. ಕೇವಲ ಹಿಂದುಳಿದ ವರ್ಗಗಳು ಒಂದಾಗುವ ಬದಲು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡಗಳೆಲ್ಲ ಒಟ್ಟಾಗಬೇಕು’ ಎಂದು ಆಶಿಸಿದರು.
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ‘1961ರಿಂದ ಇಲ್ಲಿವರೆಗೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಡೆದ ಎಲ್ಲ ಸಮೀಕ್ಷೆಗಳು, ವರದಿಗಳಿಗೆ ವಿರೋಧ ವ್ಯಕ್ತವಾಗಿದೆ. ಅಂಕಿ ಅಂಶ ಸರಿ ಇಲ್ಲ, ಇನ್ಯಾವುದೋ ಸರಿ ಇಲ್ಲ ಎಂದು ಕಾಲಕಾಲಕ್ಕೆ ವರದಿಗಳು ದೂಳು ತಿನ್ನುವಂತೆ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಾಮಾಜಿಕ ನ್ಯಾಯದಷ್ಟೇ ಸಾಮಾಜಿಕ ಜವಾಬ್ದಾರಿಯೂ ಮುಖ್ಯ. ಈ ಹಿಂದಿನ ವರದಿಗಳು ಅನುಷ್ಠಾನಗೊಂಡಿದ್ದರೆ ಹೊಸ ಸಮೀಕ್ಷೆ ಬೇಕಾಗಿರಲಿಲ್ಲ. ಅವಕಾಶವಾದಿ ರಾಜಕಾರಣಕ್ಕೆ, ಹೊಂದಾಣಿಕೆಯ ರಾಜಕಾರಣಕ್ಕೆ ವರದಿಗಳನ್ನು ಬಲಿ ಕೊಡುವ ವ್ಯವಸ್ಥೆ ಇರುವವರೆಗೆ ಯಾವುದೇ ವರದಿಗಳು ಪ್ರಯೋಜನವಾಗದು’ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಂಬಣ್ಣ ಅರೋಲಿಕರ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.