ADVERTISEMENT

ಕೇಂದ್ರ ಬಜೆಟ್‌ 2024: ಬೆಂಗಳೂರಿನ ಸಾರ್ವಜನಿಕರು ಹೀಗಂತಾರೆ...

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 18:44 IST
Last Updated 23 ಜುಲೈ 2024, 18:44 IST
ಅಮರ್ ಮೈಸೂರು
ಅಮರ್ ಮೈಸೂರು   

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸರ್ಕಾರ ಮಹತ್ವಕಾಂಕ್ಷೆಗಳನ್ನು ಹೊಂದಿದೆ. ಕೇಂದ್ರ ಬಜೆಟ್‌ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಮಿಶ್ರ ದೃಷ್ಟಿಕೋನವನ್ನು ನೀಡುತ್ತದೆ. ನಮ್ಮ ಉದ್ಯಮದ ಪ್ರಮುಖ ಸವಾಲುಗಳನ್ನು ಎದುರಿಸಲು ಬಜೆಟ್‌ನಲ್ಲಿ ಪರಿಹಾರಗಳಿಲ್ಲ. ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ನೀಡಬೇಕಾಗಿತ್ತು.

ಅಮರ್ ಮೈಸೂರು, ಅಧ್ಯಕ್ಷ, ಕ್ರೆಡೈ ಬೆಂಗಳೂರು

***

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ–2020ರ ಪ್ರಕಾರ ಶಿಕ್ಷಣ ಕ್ಷೇತ್ರಕ್ಕೆ ಶೇಕಡ 6ರಷ್ಟು ಅನುದಾನ ಮೀಸಲಿಡಬೇಕಿತ್ತು. ಆದರೆ, ಕೇಂದ್ರದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ 4ರಷ್ಟು ಕಡಿಮೆ ಅನುದಾನ ನೀಡಿರುವುದು ಖಂಡನೀಯ. ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಷರತ್ತು ಆಧರಿಸಿದ ಸಾಲ ನೀಡುವ ಘೋಷಣೆ ಆಘಾತಕಾರಿ ಆಗಿದೆ.

।ಅಜಯ್ ಕಾಮತ್, ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ

***

ಕೇಂದ್ರದ ಬಜೆಟ್‌ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲಕ್ಕಾಗಿ ₹1.48 ಲಕ್ಷ ಕೋಟಿ ಘೋಷಿಸುವ ಮೂಲಕ ಈ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಮೂಲ್ಯವಾದ ಪ್ರಾಯೋಗಿಕ ಕೆಲಸದ ಅನುಭವ ಮತ್ತು ಕೌಶಲ ಅಭಿವೃದ್ಧಿಯ ಅವಕಾಶಗಳೊಂದಿಗೆ ಒಂದು ಕೋಟಿ ಯುವಜನರಿಗೆ ಇಂಟರ್ನ್‌ಶಿಪ್‌ ಒದಗಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ಬಜೆಟ್ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯನ್ನು ಖಾತ್ರಿಪಡಿಸುತ್ತದೆ.

ಪಿ. ಶ್ಯಾಮರಾಜು, ಕುಲಪತಿ, ರೇವಾ ವಿಶ್ವವಿದ್ಯಾಲಯ

***

ಕೇಂದ್ರದ ಬಜೆಟ್‌ ಜನಸಾಮಾನ್ಯರಿಗೆ ಹೊರೆಯಾಗಿದೆ. ವಿಜ್ಞಾನ, ತಂತ್ರಜ್ಞಾನ ಆಧಾರಿತ ಕೃಷಿಗೆ ಹೆಚ್ಚು ಆದ್ಯತೆ ನೀಡಬಹುದಿತ್ತು. ಮೊಬೈಲ್‌ ಬಿಡಿ ಭಾಗಗಳ ಬೆಲೆ ಇಳಿಕೆ ಮಾಡಲಾಗಿದೆ. ಆದರೆ, ಮೊಬೈಲ್‌ ರೀಚಾರ್ಜ್‌ ದರ ಏರಿಕೆ ಮಾಡಿರುವುದು ಖಂಡನೀಯ. ದಕ್ಷಿಣ ಭಾರತ ಎಲ್ಲ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಬೇಕಾಗಿತ್ತು.

।ಸಾಗರ್ ದ್ರಾವಿಡ್, ಗೋವಿಂದರಾಜನಗರ

**

ದೇಶದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ದೂರದೃಷ್ಟಿಯುಳ್ಳ ಬಜೆಟ್‌ ಇದಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌ ಸೇರಿದಂತೆ ಒಟ್ಟು 12 ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಿಸಿರುವುದು ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ಶಕ್ತಿ ತುಂಬಲಿದೆ.

।ಆರ್. ಅರ್ಚನಾ, ಸಹಾಯಕ ಪ್ರಾಧ್ಯಾಪಕರು, ವಿಜಯ ಪದವಿ ಪೂರ್ವ ಕಾಲೇಜು, ಜಯನಗರ

***

ಮಹಿಳೆಯರು ಸ್ವ–ಉದ್ಯೋಗಿಗಳಾಗಿ ಹೊರಹೊಮ್ಮಲು ಮತ್ತಷ್ಟು ಸದಾವಕಾಶಗಳನ್ನು 2024-25ನೇ ಸಾಲಿನ ಕೇಂದ್ರ ಬಜೆಟ್‌ ಒದಗಿಸಲಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅನುಕೂಲವಾಗುವ ಯೋಜನೆಗಳಿಗೆ ₹3 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.

।ನಂದಿನಿ ಎಸ್‌.ವಿ., ಗೃಹಿಣಿ, ಹೆಸರಘಟ್ಟ

***

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು‌ ಮಂಡಿಸಿದ ಬಜೆಟ್‌ ಮತ್ತೊಮ್ಮೆ ಮಧ್ಯಮ ವರ್ಗದವರಿಗೆ ನಿರಾಸೆ ತಂದಿದೆ. ಬಜೆಟ್‌ನಲ್ಲಿ ಕೆಲವು ಪ್ರಯೋಜನಗಳಿದ್ದರೂ, ಆಯ್ದ ರಾಜ್ಯಗಳಿಗೆ ಮಾತ್ರ (ಆಂಧ್ರಪ್ರದೇಶ, ಬಿಹಾರ) ಹೆಚ್ಚು ಒಲವು ತೋರಿದಂತೆ ಕಾಣುತ್ತಿದೆ. ಹಾಗೂ ಇತರೆ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆ ಮಾಡುವುದು ಸರಿಯೇ?

।ರಾಶಿ ಶೆಟ್ಟಿ, ಅಂಧ್ರಹಳ್ಳಿ

***

ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಿಗೆ 2024–25ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ನೀತಿಯನ್ನು ಪರಿಷ್ಕರಿಸಿರುವುದು ಸಂತಸ ತಂದಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಉದ್ಯೋಗ ಮತ್ತು ಬೆಂಬಲ ನೀಡಿರುವುದು ಆಶಾದಾಯಕವಾಗಿದೆ.

।ಎ.ಎ. ವೈಷ್ಣವಿ, ವಿದ್ಯಾರ್ಥಿನಿ, ನೆಲಗದರನಹಳ್ಳಿ

***

ಕೃಷಿ, ಉದ್ಯೋಗ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಮೇಲೆ‌ ಬಜೆಟ್ ಗಮನಹರಿಸಿದೆ. ಮೂಲಸೌಕರ್ಯ ಹಾಗೂ ಸಹಜ ಕೃಷಿಗೆ ಬೆಂಬಲ ನೀಡಿರುವುದೇ ಇದಕ್ಕೆ ಸಾಕ್ಷಿ. ಇದರಿಂದ, ಉತ್ಪಾದಕತೆ ಹೆಚ್ಚಲಿದೆ. ತೆರಿಗೆ ನೀತಿಯಲ್ಲಿ‌ನ ಬದಲಾವಣೆ ಹೂಡಿಕೆದಾರರಲ್ಲಿ ಕಳವಳ ಉಂಟು ಮಾಡಿದರೂ, ಇದರಿಂದ, ಹೆಚ್ಚಿನ‌ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುವ‌ ಸಾಧ್ಯತೆ ಇದೆ.

।ಜೆನಿ‌ ಸುಸಾನ್, ಯಶವಂತಪುರ

***

ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲ ಮಾಡಿಕೊಡುವ ‘ನಾರಿಶಕ್ತಿ’ ಬಜೆಟ್ ಇದು. ಪ್ರಮುಖ ಆದ್ಯತಾ ವಲಯಗಳಾದ ಶಿಕ್ಷಣ, ಉದ್ಯೋಗ ಮತ್ತು ಕೌಶಲಕ್ಕೆ ಆದ್ಯತೆ ನೀಡಲಾಗಿದೆ. ಜೊತೆಗೆ, ಸಂಶೋಧನೆ, ಆವಿಷ್ಕಾರ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ.

।ಹೇಮಾ, ಉಪನ್ಯಾಸಕಿ, ವಿಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.