ADVERTISEMENT

‘ಕೊರಿಯರ್’ ನೆಪದಲ್ಲಿ ಸರ ಕದಿಯುತ್ತಿದ್ದವ ಬಂಧನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 18:41 IST
Last Updated 8 ನವೆಂಬರ್ 2021, 18:41 IST

ಬೆಂಗಳೂರು: ‘ಕೊರಿಯರ್’ ನೀಡುವ ನೆಪದಲ್ಲಿ ಮನೆಗಳಿಗೆ ಹೋಗಿ ಮಹಿಳೆಯರ ಚಿನ್ನದ ಸರಗಳನ್ನು ಕಿತ್ತೊಯ್ಯುತ್ತಿದ್ದ ಆರೋಪಿ ಫರ್ವೀದ್ (26) ಎಂಬಾತನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

‘ನೆಲಮಂಗಲದ ಫರ್ವೀದ್, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಆತನಿಂದ 2 ಚಿನ್ನದ ಸರ, 2 ಕಾರು ಹಾಗೂ 4 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯದ ₹ 8.50 ಲಕ್ಷ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಜೀವನ ನಿರ್ವಹ
ಣೆಗೆ ಸಂಬಳ ಸಾಲುತ್ತಿರಲಿಲ್ಲ. ಹೀಗಾಗಿ, ಸುಲಿಗೆ ಮಾಡಲಾರಂಭಿಸಿದ್ದ. ನಂತರ ವಾಹನ ಹಾಗೂ ಸರ ಕಳವು ಶುರು ಮಾಡಿದ್ದ. ಪ್ರಕರಣವೊಂದರಲ್ಲಿ ಜೈಲಿಗೂ ಹೋಗಿ ಬಂದಿದ್ದ’ ಎಂದರು.

ADVERTISEMENT

ಮನೆ ಬಾಗಿಲು ಬಡಿದು ಕೃತ್ಯ: ‘ಒಂಟಿ ಮಹಿಳೆಯರು ಇರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿ, ಕೊರಿಯರ್ ನೀಡುವ ನೆಪದಲ್ಲಿ ಮನೆಗಳಿಗೆ ಹೋಗಿ, ಬಾಗಿಲು ಬಡಿಯುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಯರು ಬಾಗಿಲು ತೆರೆಯುತ್ತಿದ್ದಂತೆ, ಕೊರಿಯರ್ ಬಂದಿರುವುದಾಗಿ ಹೇಳಿ ಮೊಬೈಲ್ ಸಂದೇಶ ತೋರಿಸುತ್ತಿದ್ದ. ಸಂದೇಶ ನೋಡುತ್ತಿದ್ದಾಗಲೇ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.