ADVERTISEMENT

ಹೆಂಡತಿ ಕಾಟಕ್ಕೆ ಕೊಲೆ: ಗೋವಾದ ಕೊಠಡಿಯಲ್ಲಿ 8 ಕೆ.ಜಿ. ಚಿನ್ನ

* ‘ದೀಪಂ ಎಲೆಕ್ಟ್ರಿಕಲ್ಸ್‌’ ಮಳಿಗೆ ಮಾಲೀಕನ ಹತ್ಯೆ * ಕೆಲಸಗಾರನ ಮೂವರು ಸ್ನೇಹಿತರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:48 IST
Last Updated 7 ಜೂನ್ 2022, 19:48 IST
   

ಬೆಂಗಳೂರು: ಚಿಕ್ಕಪೇಟೆಯಲ್ಲಿರುವ ‘ದೀಪಂ ಎಲೆಕ್ಟ್ರಿಕಲ್ಸ್‌’ ಮಳಿಗೆ ಮಾಲೀಕ ಜುಗರಾಜ್‌ ಜೈನ್‌ (74) ಕೊಲೆ ಪ್ರಕರಣದಡಿ ಕೆಲಸಗಾರ ಬಿಜರಾಮ್ (24) ಅವರನ್ನು ಬಂಧಿಸಿದ್ದ ಪಶ್ಚಿಮ ವಿಭಾಗದ ಪೊಲೀಸರು, ಇದೀಗ ಅವರ ಮೂವರು ಸ್ನೇಹಿತರನ್ನು ಸೆರೆ ಹಿಡಿದಿದ್ದಾರೆ.

‘ಪೂರನ್ ರಾಮ್ ದೇವಸಿ (26), ಮಹೇಂದ್ರ ದೇವಸಿ (27), ಓಂ ಪ್ರಕಾಶ್ ದೇವಸಿ (24) ಬಂಧಿತರು. ಇವರೆಲ್ಲ ಬಿಜರಾಮ್ ಜೊತೆ ಸೇರಿ ಜುಗರಾಜ್ ಅವರನ್ನು ಮೇ 24ರಂದು ಕೊಲೆ ಮಾಡಿದ್ದರು. ಪ್ರಮುಖ ಆರೋಪಿ ಬಿಜರಾಮ್, ಗುಜರಾತ್‌ನಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದ. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ, ಮೂವರು ಸ್ನೇಹಿತರನ್ನೂ ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದರು.

‘ನಾಲ್ವರು ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ಜುಗರಾಜ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಕೈಗಳನ್ನು ಪ್ಲಾಸ್ಟಿಕ್ ದಾರದಿಂದ ಕಟ್ಟಿದ್ದರು. ಕೂಗಾಡದಂತೆ ಬಾಯಿಗೆ ಬಟ್ಟೆ ತುರಕಿದ್ದರು. ನಂತರ, ಕತ್ತು ಹಿಸುಕಿ ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದು ಸಮೇತ ಪರಾರಿಯಾಗಿದ್ದರು.’

ADVERTISEMENT

‘₹ 4.93 ಕೋಟಿ ಮೌಲ್ಯದ 8 ಕೆ.ಜಿ 752 ಗ್ರಾಂ ಚಿನ್ನಾಭರಣ, 3 ಕೆ.ಜಿ 870 ಗ್ರಾಂ ಬೆಳ್ಳಿ ಸಾಮಗ್ರಿ, ₹ 53.48 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದೂ ಕಮಿಷನರ್ ಹೇಳಿದರು.

‘ಬಂಧಿತ ಪೂರನ್ ರಾಮ್ ದೇವಸಿ, ಗೋವಾದಲ್ಲಿ ಹಾರ್ಡ್‌ವೇರ್‌ ಮಳಿಗೆ ನಡೆಸುತ್ತಿದ್ದ. ಈತ ವಾಸವಿದ್ದ ಗೋವಾದ ಕೊಠಡಿಯಲ್ಲೇ 8 ಕೆ.ಜಿ 500 ಗ್ರಾಂ ಚಿನ್ನಾಭರಣ ಸಿಕ್ಕಿದೆ. ಇನ್ನೊಬ್ಬ ಆರೋಪಿ ಮಹೇಂದ್ರ ದೇವಸಿ, ರಾಜಸ್ಥಾನದ ಪಾಲಿ ಜಿಲ್ಲೆಯ ಕಿವಾಲ್ ಗ್ರಾಮದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ. ರಾಜಸ್ಥಾನದವನೇ ಆದ ಮತ್ತೊಬ್ಬ ಆರೋಪಿ ಓಂ ಪ್ರಕಾಶ್ ದೇವಸಿ, ಚಿಕ್ಕಪೇಟೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ’ ಎಂದೂ ತಿಳಿಸಿದರು.

ಹೆಂಡತಿ ಕಾಟಕ್ಕೆ ಕೊಲೆ: ‘ರಾಜಸ್ಥಾನದಿಂದ ಆರು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಬಿಜರಾಮ್‌ನಿಗೆ, ಮೃತ ಜುಗರಾಜ್‌ ಜೈನ್‌ ಅವರ ಮಗನ ಪರಿಚಯವಾಗಿತ್ತು. ತಂದೆ ಜೊತೆ ಕೆಲಸಕ್ಕೆಂದು ಬಿಜರಾಮ್‌ನನ್ನು ಮಗನೇ ನೇಮಿಸಿದ್ದರು. ಇದಕ್ಕಾಗಿ ಪ್ರತಿ ತಿಂಗಳು ₹ 15 ಸಾವಿರ ಸಂಬಳ ನಿಗದಿಪಡಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೀವನ ನಿರ್ವಹಣೆಗೆ ಸಂಬಳ ಸಾಲುತ್ತಿರಲಿಲ್ಲ. ಬಿಜರಾಮ್ ಜೊತೆ ನಿತ್ಯವೂ ಜಗಳ ತೆಗೆಯುತ್ತಿದ್ದ ಹೆಂಡತಿ ಹೆಚ್ಚು ಹಣ ತರುವಂತೆ ಪೀಡಿಸುತ್ತಿದ್ದಳು. ಅಡುಗೆ ಹಾಗೂ ಮನೆ ಕೆಲಸ ಸಹ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ಬಿಜರಾಮ್, ಸ್ನೇಹಿತರ ಜೊತೆ ಸೇರಿ ತನ್ನ ಮಾಲೀಕರನ್ನೇ ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಲು ಮುಂದಾಗಿದ್ದ’ ಎಂದೂ ತಿಳಿಸಿವೆ.

‘ಹುಬ್ಬಳ್ಳಿ–ಗೋವಾ ಮೂಲಕ ರಾಜಸ್ಥಾನಕ್ಕೆ’
‘ಚಾಮರಾಜಪೇಟೆಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಜುಗರಾಜ್‌ ಜೈನ್‌ ಕುಟುಂಬ ವಾಸವಿತ್ತು. ಅವರ ಮಗ ಹಾಗೂ ಇತರೆ ಸದಸ್ಯರು ಕೆಲಸದ ನಿಮಿತ್ತ ಮೇ 23ರಂದು ಬೇರೆ ಊರಿಗೆ ಹೋಗಿದ್ದರು. ಅದನ್ನೇ ಕಾಯುತ್ತಿದ್ದ ಬಿಜರಾಮ್‌ ಮೇ 24ರಂದು ಸ್ನೇಹಿತರನ್ನು ಮನೆಗೆ ಕರೆಸಿ ಮಾಲೀಕರನ್ನು ಕೊಲೆ ಮಾಡಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಲೆ ಬಳಿಕ ಚಿನ್ನಾಭರಣ ಹಾಗೂ ನಗದನ್ನು ಚೀಲದಲ್ಲಿ ತುಂಬಿಕೊಂಡಿದ್ದ ಆರೋಪಿಗಳು ಮೆಜೆಸ್ಟಿಕ್‌ ನಿಲ್ದಾಣದಿಂದ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಹೋಗಿದ್ದರು. ಅಲ್ಲಿಂದ ಕಾರಿನಲ್ಲಿ ಹುಬ್ಬಳ್ಳಿ ಮಾರ್ಗವಾಗಿ ಗೋವಾ ತಲುಪಿದ್ದರು. ಸಂಚಿನಂತೆ ಗೋವಾದಲ್ಲಿದ್ದ ಪೂರನ್‌ ರಾಮ್ ಕೊಠಡಿಯಲ್ಲಿ 8 ಕೆ.ಜಿ 500 ಗ್ರಾಂ ಚಿನ್ನಾಭರಣ ಇರಿಸಿದ್ದರು.’

‘ಉಳಿದ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ಆರೋಪಿಗಳು ರಾಜಸ್ಥಾನಕ್ಕೆ ಹೋಗಿದ್ದರು. ಬೆಂಗಳೂರು ಪೊಲೀಸರು ತಮ್ಮೂರಿಗೆ ಬರಬಹುದೆಂದು ತಿಳಿದಿದ್ದ ಬಿಜರಾಮ್, ಗುಜರಾತ್‌ಗೆ ಹೊರಟಿದ್ದ. ಗಡಿಯಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.