ADVERTISEMENT

‘ವಿಕ್ರಮ ಬೇತಾಳ’ ಸೃಷ್ಟಿಕರ್ತ ಕಲಾವಿದ ಕೆ.ಸಿ. ಶಿವಶಂಕರ ನಿಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 19:51 IST
Last Updated 30 ಸೆಪ್ಟೆಂಬರ್ 2020, 19:51 IST
ಕಲಾವಿದ ಕೆ.ಸಿ.ಶಿವಶಂಕರ
ಕಲಾವಿದ ಕೆ.ಸಿ.ಶಿವಶಂಕರ   

ಚೆನ್ನೈ: ‘ಚಂದಮಾಮ’ ಮಕ್ಕಳ ಪುಸ್ತಕದಲ್ಲಿ ‘ವಿಕ್ರಮ ಮತ್ತು ಬೇತಾಳ’ ಪಾತ್ರಗಳನ್ನು ಕುಂಚದಲ್ಲಿ ಚಿತ್ರಿಸಿದ್ದ ಕಲಾವಿದ ಕೆ.ಸಿ. ಶಿವಶಂಕರ (97) ಅವರು ಮಂಗಳವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಮೂಲ ಚಂದಮಾಮ ವಿನ್ಯಾಸ ತಂಡದ ಪೈಕಿ ಇವರೊಬ್ಬರು ಮಾತ್ರ ಈವರೆಗೆ ಬದುಕಿದ್ದರು.

1960ರ ದಶಕದಲ್ಲಿ ಅವರು ರಚಿಸಿದ್ದ ಚಿತ್ರಗಳು ಸಾಕಷ್ಟು ಖ್ಯಾತಿ ಪಡೆದಿದ್ದವು. ವಿಕ್ರಮ ಮತ್ತು ಬೇತಾಳ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇಂತಹ ಸಾವಿರಾರು ಕಲಾಕೃತಿಗಳು ಅವರ ಕುಂಚದಲ್ಲಿ ಮೂಡಿವೆ. ದಶಕಗಳ ಕಾಲ ಈ ಚಿತ್ರಗಳು ಮಕ್ಕಳು ಹಾಗೂ ಚಿತ್ರಪ್ರೇಮಿಗಳನ್ನು ಸೆಳೆದಿದ್ದವು.ಅವರು ಭಾರತೀಯ, ಓರಿಯಂಟಲ್, ಮಧ್ಯಪ್ರಾಚ್ಯ ಮತ್ತು ಯುರೋಪಿಯನ್ ಕಲಾತ್ಮಕ ಸಂಪ್ರದಾಯಗಳಿಂದ ಪ್ರಭಾವಿತವಾದ ಶೈಲಿಯೊಂದಿಗೆ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು.

1924ರ ಜುಲೈ 19ರಂದು ತಮಿಳುನಾಡಿನ ಈರೋಡಿನಲ್ಲಿ ಶಿವಶಂಕರನ್ ಜನಿಸಿದರು. ಶಾಲೆಯಲ್ಲಿ ಓದುವಾಗ ಇತಿಹಾಸ ಪುಸ್ತಕದಲ್ಲಿ ಬರುವ ಐತಿಹಾಸಿಕ ವ್ಯಕ್ತಿಗಳನ್ನು ರೇಖೆಗಳಲ್ಲಿ ಮೂಡಿಸುವ ಹವ್ಯಾಸ ಬೆಳೆಸಿಕೊಂಡರು. ಚೆನ್ನೈನ ಸರ್ಕಾರಿ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಚಿತ್ರ ಕಲಾವಿದರಾಗಿ ‘ಕಲೈಮಗಳ್’ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ಅವರು, ಚಂದಮಾಮ ಪುಸ್ತಕದ ತಮ್ಮ ಅಮೂಲ್ಯ ಚಿತ್ರಗಳಿಂದಾಗಿ ಗುರುತಿಸಿಕೊಂಡಿದ್ದರು.

ADVERTISEMENT

ಕಲಾವಿದ ಮುತ್ಕೂರು ಬಸಪ್ಪ ನಿಧನ

ಬೆಂಗಳೂರು: ರಂಗಭೂಮಿ ಕಲಾವಿದ ಮುತ್ಕೂರು ಬಸಪ್ಪ (83) ಅವರು ಯಲಹಂಕದಲ್ಲಿರುವ ತಮ್ಮ ನಿವಾಸದಲ್ಲಿಬುಧವಾರ ನಿಧನರಾದರು.ಮೃತರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.

ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಯಲಹಂಕ ಬಳಿಯ ಮುತ್ಕೂರು ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.

ರಾವಣ, ದುರ್ಯೋಧನ ಹಾಗೂ ಭೀಮನ ಪಾತ್ರ ನಿರ್ವಹಿಸುತ್ತಿದ್ದ ಬಸಪ್ಪ ಅವರನ್ನು ‘ಅಭಿನವ ರಾವಣಾಸುರ’ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು. ಐದು ದಶಕಗಳಲ್ಲಿ ಸಾವಿರಾರು ರಂಗ ಪ್ರಯೋಗಗಳನ್ನು ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.