ADVERTISEMENT

ಬೂದಿಹಾಳ್‌: ಲೋಕಕಲ್ಯಾಣಾರ್ಥಕ್ಕೆ ಚಂಡಿಯಾಗ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:34 IST
Last Updated 5 ಏಪ್ರಿಲ್ 2019, 19:34 IST
ಪಾರಾಯಣದಲ್ಲಿ ತೊಡಗಿದ್ದ ಋತ್ವಿಕರು
ಪಾರಾಯಣದಲ್ಲಿ ತೊಡಗಿದ್ದ ಋತ್ವಿಕರು   

ನೆಲಮಂಗಲ: ತಾಲ್ಲೂಕಿನ ಬೂದಿಹಾಳ್‌ನಲ್ಲಿ ಲೋಕ ಕಲ್ಯಾಣಾರ್ಥವಾಗಿ 11 ದಿನಗಳ ಆಯುತಚಂಡಿ ಯಾಗ ನಡೆಯುತ್ತಿದೆ.

ದಿನೇಶ್‌ ಗುರೂಜಿ ಅವರ ನೇತೃತ್ವದಲ್ಲಿ, ಉದ್ಯಮಿ ತಿಪ್ಪಣ್ಣ ಅವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಯಾಗದ ಮಹಾಪೂರ್ಣಾಹುತಿ ಶುಕ್ರವಾರ ಜರುಗಿತು. ಯಾಗವು ಏಪ್ರಿಲ್‌ 12ರಂದು ಪೂರ್ಣಗೊಳ್ಳಲಿದೆ.

ಯಾಗದ ಸ್ಥಳದಲ್ಲಿ ಚಂಡಿಕಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸಲಾಗಿದೆ. 1,008 ಕಳಸಗಳ ಸ್ಥಾಪನೆ ಮಾಡಲಾಗಿದೆ. ಪ್ರತಿನಿತ್ಯ 375 ಋತ್ವಿಕರು ಬೆಳಿಗ್ಗೆ ಮತ್ತು ಸಂಜೆ ಗಣಪತಿ, ದುರ್ಗಾ, ಲಕ್ಷ್ಮೀನರಸಿಂಹ, ನವಗ್ರಹ, ಅಯ್ಯಪ್ಪ, ಸುಬ್ರಹ್ಮಣ್ಯ, ಸಂಹಿತಾ ಯಾಗ ಮಾಡುತ್ತಿದ್ದಾರೆ. ಗುರುಚರಿತೆ, ಸಪ್ತಶತಿ ಪಾರಾಯಣ, 130 ನವಾಕ್ಷರ ಜಪಗಳನ್ನು ಮಾಡುತ್ತಿದ್ದಾರೆ. ನಿತ್ಯವೂ ರಥೋತ್ಸವ, ಪ್ರಸಾದ ವಿನಿಯೋಗವಾಗುತ್ತಿದೆ. ಸುಮಾರು 1,500 ಜನ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದಾರೆ.

ADVERTISEMENT

ಏ.12 ಶುಕ್ರವಾರದಂದು 101 ಅಗ್ನಿಕುಂಡಗಳಲ್ಲಿ ಚಂಡಿ ಹೋಮ ನಡೆಯಲಿದೆ. 15,000 ಕೆ.ಜಿ. ಪರಮಾನ್ನ ಪೂರ್ಣಾಹುತಿಗೆ ಸಮರ್ಪಣೆಯಾಗಲಿದೆ. ಜತೆಗೆ ಬ್ರಹ್ಮಚಾರಿ, ಕನ್ನಿಕೆ, ಸುವಾಸಿನಿ, ದಂಪತಿ ಆರಾಧನೆ, ವಿಜಯ ದುರ್ಗಾಪರಮೇಶ್ವರಿ ದೇವಿಗೆ ಮಹಾಮಂಗಳಾರತಿಯೊಂದಿಗೆ ಯಾಗ ಸಂಪನ್ನವಾಗಲಿದೆ.

ಶಿವಗಂಗೆ ಶಾರದಾ ಪೀಠದ ಪುರುಷೋತ್ತಮ ಭಾರತಿ ಸ್ವಾಮೀಜಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ,‘ ನಾವು ಮಾಡುವ ಕೆಲಸದಲ್ಲಿ ಭಗವಂತನ ಕೃಪೆ ಸಿಗಬೇಕಾದರೆ, ನಿರ್ಮಲ ಮನಸ್ಸಿನಿಂದ ಧರ್ಮಾಚರಣೆ ಮಾಡಬೇಕು. ಮನುಷ್ಯನ ಜೀವನ ಸಮಾಜಕ್ಕೆ ಉಪಯೋಗವಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.