ADVERTISEMENT

ಜೀವನಶೈಲಿ ಬದಲಿಸಿ, ಮಧುಮೇಹ ನಿಯಂತ್ರಿಸಿ: ತಜ್ಞ ವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 21:35 IST
Last Updated 18 ನವೆಂಬರ್ 2021, 21:35 IST
‘ಬೊಜ್ಜು ಇರುವ ಮಧುಮೇಹ ವ್ಯಕ್ತಿಗಳಿಗೆ ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಿಂದಾಗುವ ಪ್ರಯೋಜನಗಳು’ ಕುರಿತ ಚರ್ಚೆಯಲ್ಲಿ ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫರೀದಾ ಮತ್ತು ದೀಪಕ್‌ ತರುಣ್‌ ಹಾಗೂ ವೈದ್ಯ ಡಾ. ಜಿ. ಮೊಯಿನುದ್ದೀನ್‌, ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌’ನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಲಿಸ್ಟಿ ಪ್ರಭಾಕರ್‌, ವೈದ್ಯರಾದ ಡಾ. ಪ್ರಿಯಾ ಚಿನ್ನಪ್ಪ, ಡಾ. ಶಾರದಾ ಭಾಗವಹಿಸಿದ್ದರು.–ಪ್ರಜಾವಾಣಿ ಚಿತ್ರ
‘ಬೊಜ್ಜು ಇರುವ ಮಧುಮೇಹ ವ್ಯಕ್ತಿಗಳಿಗೆ ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಿಂದಾಗುವ ಪ್ರಯೋಜನಗಳು’ ಕುರಿತ ಚರ್ಚೆಯಲ್ಲಿ ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫರೀದಾ ಮತ್ತು ದೀಪಕ್‌ ತರುಣ್‌ ಹಾಗೂ ವೈದ್ಯ ಡಾ. ಜಿ. ಮೊಯಿನುದ್ದೀನ್‌, ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌’ನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಲಿಸ್ಟಿ ಪ್ರಭಾಕರ್‌, ವೈದ್ಯರಾದ ಡಾ. ಪ್ರಿಯಾ ಚಿನ್ನಪ್ಪ, ಡಾ. ಶಾರದಾ ಭಾಗವಹಿಸಿದ್ದರು.–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮತೋಲನದ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಿಸಬಹುದು. ದಿನನಿತ್ಯ ನಾವು ಏನು ತಿನ್ನುತ್ತೇವೆ ಎನ್ನುವ ಬಗ್ಗೆ ಎಚ್ಚರ ವಹಿಸಿದರೆ ಮಧುಮೇಹವನ್ನು ದೂರ ಇರಿಸಬಹುದು. ಶಸ್ತ್ರಚಿಕಿತ್ಸೆ ಕೊನೆಯ ಆಯ್ಕೆ’ ಎಂದು ಮಣಿಪಾಲ್‌ ಆಸ್ಪತ್ರೆ ವೈದ್ಯರು ಅಭಿಪ್ರಾಯಪಟ್ಟರು.

ವಿಶ್ವ ಮಧುಮೇಹ ದಿನದ ಪ್ರಯುಕ್ತ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ಮಿಲ್ಲರ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆಯಲ್ಲಿ (ಈ ಮೊದಲು ವಿಕ್ರಂ ಆಸ್ಪತ್ರೆ) ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಬೊಜ್ಜು ಇರುವ ಮಧುಮೇಹ ವ್ಯಕ್ತಿಗಳಿಗೆ ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಿಂದಾಗುವ ಪ್ರಯೋಜನಗಳು’ ಕುರಿತು ತಜ್ಞ ವೈದ್ಯರು ವಿಶ್ಲೇಷಿಸಿದರು.

ಮಣಿಪಾಲ್‌ ಆಸ್ಪತ್ರೆಯ ಕನ್ಸಲ್ಟಂಟ್‌ ಎಂಡೊಕ್ರಿನೊಲಾಜಿಸ್ಟ್‌ ಡಾ. ಶಾರದಾ ಮಾತನಾಡಿ, ‘ಬೊಜ್ಜು ಹೆಚ್ಚಾಗಲು ಜೀವನ ಶೈಲಿಯೇ ಪ್ರಮುಖ ಕಾರಣ.ಒತ್ತಡದ ಬದುಕು ಸಹ ಇದಕ್ಕೆ ಕಾರಣವಾಗಿದೆ. ವ್ಯಾಯಾಮ ಆರೋಗ್ಯದ ಮೇಲೆ ಅಪಾರ ಪರಿಣಾಮ ಬೀರಲಿದೆ. ಇದರಿಂದ, ಕೊಬ್ಬಿನ ಅಂಶ ಕಡಿಮೆ ಮಾಡಬಹುದು. ಮಧುಮೇಹ ನಿಯಂತ್ರಿಸಲು ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮುನ್ನ ರೋಗಿಯ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ’ ಎಂದು ವಿವರಿಸಿದರು.

ADVERTISEMENT

ಮಣಿಪಾಲ್‌ ಆಸ್ಪತ್ರೆಯ ಗ್ರಂಥಿ ವಿಜ್ಞಾನಿ ಡಾ. ಪ್ರಿಯಾ ಚಿನ್ನಪ್ಪ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲೇ ಹೆಚ್ಚು ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಸಹ ಇದಕ್ಕೆ ಹೊರತಾಗಿಲ್ಲ. ಒಂದೇ ಸ್ಥಳದಲ್ಲಿ ಬಹು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಲ್ಲಿ ಈ ಕಾಯಿಲೆ ಕಂಡು ಬರುತ್ತಿದೆ. ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಆರಂಭವಾದ ಬಳಿಕ, ವ್ಯಾಯಾಮ ಮಾಡುವುದು ಕಡಿಮೆಯಾ
ಗಿದ್ದರಿಂದ ಹಲವರಲ್ಲಿ ಮಧುಮೇಹ ಕಂಡು ಬಂದಿದೆ’ ಎಂದು ವಿವರಿಸಿದರು.

ಕನ್ಸಲ್ಟಂಟ್‌ ಬೆರಿಯಾಟ್ರಿಕ್‌ ಮತ್ತು ಅಡ್ವಾನ್ಸ್‌ಡ್‌ ಸರ್ಜನ್‌ ಡಾ. ಜಿ. ಮೊಯಿನುದ್ದೀನ್‌, ‘ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ 50 ವರ್ಷಗಳ ಹಿಂದೆಯೇ ಆರಂಭವಾಗಿದೆ. ಇದರಲ್ಲಿ 36ಕ್ಕೂ ಹೆಚ್ಚು ಪದ್ಧತಿಗಳಿವೆ. ಹೊಟ್ಟೆ ಗಾತ್ರವನ್ನು ಕಡಿಮೆ ಮಾಡುವುದು ಈ ಶಸ್ತ್ರಚಿಕಿತ್ಸೆಯ ಮುಖ್ಯ ಉದ್ದೇಶ. ಶಸ್ತ್ರಚಿಕಿತ್ಸೆ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಆದರೆ, ಸಂಪೂರ್ಣ ಗುಣಮುಖರನ್ನಾಗಿ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಯ ಕೌಶಲದಲ್ಲೂ ಅಪಾರ ಸುಧಾರಣೆಯಾಗಿದೆ’ ಎಂದರು.

‘ಮೈದಾ ಇರುವ ತಿಂಡಿ ತಿನಿಸುಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ದಿನನಿತ್ಯ ನಡೆಯಬೇಕು. ಇಂದು ತೂಕ ಕಡಿಮೆ ಮಾಡುವುದು ಸಹ ಉದ್ಯಮವಾಗಿದೆ. ಹೀಗಾಗಿ ಜನರು ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ದೀಪಕ್‌ ತರುಣ್‌ ಮತ್ತು ಫರೀದಾ ಅವರು ತಮ್ಮ ಅನುಭವಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.

‘185 ಕೆ.ಜಿ. ಇದ್ದ ನಾನು ಈಗ 125 ಕೆ.ಜಿ.ಗೆ ಇಳಿದಿದ್ದೇನೆ. ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ಬಳಿಕ 6–7 ದಿನಗಳಲ್ಲಿ ಗುಣಮುಖನಾಗಿ ಮತ್ತೆ ಎಂದಿನಂತೆ ಕೆಲಸಕ್ಕೆ ತೆರಳಿದೆ’ ಎಂದು ದೀಪಕ್‌ ತರುಣ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.