ADVERTISEMENT

ವಿಧಾನಸೌಧದಲ್ಲಿ ನಡೆದ ‘ಡೀಲ್’ ಪ್ರಕರಣ: ಶಾಸಕರ ಭವನದ ಕಾರು ಚಾಲಕ ಸೆರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 19:44 IST
Last Updated 2 ಮಾರ್ಚ್ 2019, 19:44 IST

ಬೆಂಗಳೂರು: ₹ 100 ಕೋಟಿ ಸಾಲ ಕೊಡಿಸುವುದಾಗಿ ತಮಿಳುನಾಡಿನ ಗೋಡಂಬಿ ಉದ್ಯಮಿಯನ್ನು ವಿಧಾನಸೌಧಕ್ಕೆ ಕರೆಸಿಕೊಂಡು ವಂಚಿಸಿದ್ದ ಪ್ರಕರಣದಲ್ಲಿ ಶಾಸಕರ ಭವನದ ಕಾರು ಚಾಲಕ ಸತೀಶ್‌ನನ್ನೂ ಕಬ್ಬನ್‌ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಮಾಜಿ ಶಾಸಕರೊಬ್ಬರ ಮಗ–ಮೊಮ್ಮಕ್ಕಳು ಸೇರಿ 8 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತೀಶ್‌ನ ಹೆಸರೂ ಹೊರಬಿದ್ದಿದೆ. ಪ್ರಮುಖ ಆರೋಪಿ ಕಾರ್ತಿಕೇಯನ್‌ಗೆ ಶಾಸಕರ ಭವನದ ಕಾರನ್ನು ಬಾಡಿಗೆ ಕೊಟ್ಟಿದ್ದಲ್ಲದೆ, ಕೃತ್ಯಕ್ಕೆ ಸಹಕರಿಸಿದ ತಪ್ಪಿಗೆ ಸತೀಶ್ ಕೂಡ ಜೈಲು ಸೇರಿದ್ದಾನೆ.

ತಾನು ಮಾಜಿ ಶಾಸಕರ ಪುತ್ರನೆಂದು ಹೇಳಿಕೊಂಡು ಆಗಾಗ್ಗೆ ವಿಧಾನಸೌಧಕ್ಕೆ ಬರುತ್ತಿದ್ದ ಕಾರ್ತಿಕೇಯನ್, ಸತೀಶ್ ಸೇರಿದಂತೆ ಅಲ್ಲಿನ ಕೆಲ ನೌಕರರನ್ನು ಪರಿಚಯಿಸಿಕೊಂಡಿದ್ದ. ಆತನಿಗೆ ದಿನಕ್ಕೆ ₹ 2 ಸಾವಿರ ಕೊಟ್ಟು, ಕಾರನ್ನು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದ. ಅದರ ನೋಂದಣಿ ಫಲಕದ ಮೇಲಿದ್ದ ‘ಕರ್ನಾಟಕ ಸರ್ಕಾರ’ದ ಲೋಗೋವನ್ನೇ ಉದ್ಯಮಿ ರಮೇಶ್ ಅವರಿಗೆ ತೋರಿಸಿ, ‘ನಾನು ಈ
ರಾಜ್ಯದ ಸಚಿವ. ನಿಮಗೆ ಕಡಿಮೆ ಬಡ್ಡಿ ದರದಲ್ಲಿ ₹ 100 ಕೋಟಿ ಸಾಲ ಕೊಡಿಸುತ್ತೇನೆ’ ಎಂದು ಹುಸಿ ಭರವಸೆ ಕೊಟ್ಟಿದ್ದ.

ADVERTISEMENT

ಆ ಮಾತನ್ನು ನಂಬಿ ಜ.2ರಂದು ನಗರಕ್ಕೆ ಬಂದಿದ್ದ ರಮೇಶ್, ಎಂ.ಜಿ.ರಸ್ತೆಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅಂದು ಬೆಳಿಗ್ಗೆ ಸತೀಶ್‌ನೇ ಹೋಟೆಲ್ ಬಳಿ ತೆರಳಿ ಉದ್ಯಮಿಯನ್ನು ಸರ್ಕಾರಿ ಕಾರಿನಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದ. ಸ್ವಲ್ಪ ಸಮಯದ ನಂತರ ಕಾರ್ತಿಕೇಯನ್‌ನನ್ನೂ ಅದೇ ಕಾರಿನಲ್ಲಿ ವಿಧಾನಸೌಧಕ್ಕೆ ಕರೆದೊಯ್ದಿದ್ದ. ಅಲ್ಲದೆ, ಸಚಿವರ ಹಿಂಬಾಲಕನಂತೆಯೂ ನಟಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ವಿಧಾನಸೌಧದ ಕೊಠಡಿಯಲ್ಲಿ ರಮೇಶ್ ಜತೆ ಸಚಿವರ ಸೋಗಿನಲ್ಲೇ ಮಾತುಕತೆ ನಡೆಸಿದ್ದ ಕಾರ್ತಿಕೇಯನ್, ₹ 100 ಕೋಟಿ ಸಾಲ ಕೊಡಿಸಲು ಶುಲ್ಕದ ರೂಪದಲ್ಲಿ ₹ 1.12 ಕೋಟಿ ಪಡೆದು ವಂಚಿಸಿದ್ದ. ‘ಕಾರ್ತಿಕೇಯನ್‌ನ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಆತ ಸತೀಶ್ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸಂಗತಿ ಗೊತ್ತಾಯಿತು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.