ADVERTISEMENT

ಹೂಡಿಕೆ ನೆಪದಲ್ಲಿ ₹1.28 ಕೋಟಿ ವಂಚನೆ; ಉಪನ್ಯಾಸಕನ ವಿರುದ್ಧ ಎಫ್‌ಐಆರ್‌

ದೂರು ಪಡೆಯಲು ನಿರಾಕರಿಸಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:40 IST
Last Updated 1 ಮಾರ್ಚ್ 2020, 19:40 IST
.
.   

ಬೆಂಗಳೂರು: ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಹೂಡಿಕೆ ನೆಪದಲ್ಲಿ ₹ 1.28 ಕೋಟಿ ಪಡೆದುಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ಉಪನ್ಯಾಸಕ ಎಸ್‌. ರಮೇಶ್‌ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಆರೋಪಿಗಳಾದ ಉಪನ್ಯಾಸಕ ಶ್ರೀನಿವಾಸ್ ಹಾಗೂ ಅವರ ಪತ್ನಿ ಸುನೀತಾ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಶ್ರೀನಿವಾಸ್, ತಮಗೆ ಹಣದ ವ್ಯವಹಾರ ಚೆನ್ನಾಗಿ ಗೊತ್ತಿರುವುದಾಗಿ ತಿಳಿಸಿದ್ದರು. ಹಣವನ್ನು ಹೂಡಿಕೆ ಮಾಡಿದರೆ ಶೇ 2ರಷ್ಟು ಲಾಭಾಂಶ ಕೊಡಿಸುವುದಾಗಿ ಹೇಳಿದ್ದರು. ಅವರ ಮಾತು ನಂಬಿ ಹಣ ಹೂಡಿಕೆ ಮಾಡಿದ್ದೆ. ನನ್ನ ಸ್ನೇಹಿತರನ್ನೂ ಪರಿಚಯ ಮಾಡಿಕೊಂಡು ಆತ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಅದಕ್ಕೆ ಪತ್ನಿಯೂ ಸಹಕಾರ ನೀಡಿದ್ದರು’ ಎಂದು ದೂರಿನಲ್ಲಿ ರಮೇಶ್ ಹೇಳಿದ್ದಾರೆ.

ADVERTISEMENT

‘ನನ್ನ ಹಾಗೂ ಹಲವರಿಂದ ₹ 1.28 ಕೋಟಿ ಹೂಡಿಕೆ ಮಾಡಿಸಿದ್ದ ಆರೋಪಿಗಳು, ಅದಕ್ಕೆ ಪ್ರತಿಯಾಗಿ ಯಾವುದೇ ಲಾಭಾಂಶ ಕೊಡಿಸಿಲ್ಲ. ಹಣವನ್ನೂ ವಾಪಸು ನೀಡಿಲ್ಲ. ಇದನ್ನು ಕೇಳಿದ್ದಕ್ಕೆ ಜೀವಬೆದರಿಕೆ ಹಾಕಿದ್ದರು. ಈ ಬಗ್ಗೆ ದೂರು ನೀಡಲು ಹೋದರೆ ಬ್ಯಾಟರಾಯನಪುರ ಪೊಲೀಸರು ವಾಪಸು ಕಳುಹಿಸಿದ್ದರು. ನೊಂದುಕೊಂಡು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೆ’ ಎಂದೂ ರಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.