ADVERTISEMENT

ವಂಚನೆ ಪ್ರಕರಣ: ಹಾಂಕಾಂಗ್‌ ಕಂಪನಿ ನಿರ್ದೇಶಕನ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:31 IST
Last Updated 12 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿದೇಶಿ ವ್ಯಾಪಾರ ಚಟುವಟಿಕೆಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಪೈಸಸ್‌ ಟ್ರೇಡಿಂಗ್‌ ಕಾರ್ಪೋರೇಷನ್‌ ಲಿಮಿಟೆಡ್‌ಗೆ (ಎಸ್‌ಟಿಸಿಎಲ್‌) ₹ 1,841 ಕೋಟಿ ವಂಚಿಸಿದ್ದ ಆರೋಪದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಾಂಕಾಂಗ್‌ನ ಹೊಯ್‌ವಿಲಾಯಿ ಜಿನ್ಸು ಕಂಪನಿಯ ನಿರ್ದಶಕ ಅನೂಪ್‌ ನಾಗರಾಳ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.

ವಿದೇಶಿ ವ್ಯಾಪಾರ ನಡೆಸಲು ಎಸ್‌ಟಿಸಿಎಲ್‌ ಜತೆಗೆ ಎಫ್‌ಎಂಪಿಎಲ್‌ ಮತ್ತು ಎಫ್‌ಇಐಪಿಎಲ್‌ ಎಂಬ ಕಂಪನಿಗಳು ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದವು. ಈ ಕಂಪನಿಗಳ ಅಧ್ಯಕ್ಷ ನವೀನ್‌ ಶ್ರೀರಾಂ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ಶ್ರೀರಾಂ ಬ್ಯಾಂಕ್‌ ಖಾತರಿ ಒದಗಿಸಿದ್ದರು. ಆದರೆ, ನಂತರದಲ್ಲಿ ಎಸ್‌ಟಿಸಿಎಲ್‌ಗೆ ಬಾಕಿ ಪಾವತಿ ಆಗಿರಲಿಲ್ಲ. ಸಾಲ ಖಾತರಿ ಪತ್ರಗಳು ನಗದಾಗದೇ ವಾಪಸ್‌ ಆಗಿದ್ದವು.

ಎಸ್‌ಟಿಸಿಎಲ್‌ಗೆ ₹ 1,841 ಕೋಟಿ ವಂಚಿಸಿದ ಆರೋಪದಡಿ 2009ರಲ್ಲಿ ನಗರದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಆಧರಿಸಿ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿದ್ದರು. 2019ರ ಮಾರ್ಚ್‌ 1ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು.

ADVERTISEMENT

ತ್ರಿಪಕ್ಷೀಯ ಒಪ್ಪಂದದಲ್ಲಿ ಹಾಂಕಾಂಗ್‌ನ ಹೊಯ್‌ವಿಲಾಯಿ ಜಿನ್ಸು ಕಂಪನಿ ಖರೀದಿದಾರನಾಗಿತ್ತು. ಈ ಕಂಪನಿಯ ನಿರ್ದೇಶಕ ಅನೂಪ್‌ ನಾಗರಾಳ್‌ ಅವರನ್ನೂ ಆರೋಪಿಯನ್ನಾಗಿ ಹೆಸರಿಸಿ ಇ.ಡಿ ದೂರು ಸಲ್ಲಿಸಿತ್ತು. 2021ರ ಜುಲೈ 28ರಂದು ಅವರ ವಿರುದ್ಧ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿತ್ತು.

‘2021ರ ಡಿಸೆಂಬರ್‌ನಲ್ಲಿ ಭಾರತಕ್ಕೆ ವಾಪಸಾದ ಅನೂಪ್‌ ಅವರನ್ನು ಸಿಬಿಐ ಬಂಧಿಸಿತ್ತು. ಜಾಮೀನು ಪಡೆದು ಬಿಡುಗಡೆ ಆದ ಬಳಿಕ ಪಿಎಂಎಲ್‌ಎ ಕಾಯ್ದೆ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಅವರ ವಿರುದ್ಧ ನ್ಯಾಯಾಲಯ ಡಿಸೆಂಬರ್‌ 31ರಂದು ವಾರೆಂಟ್‌ ಜಾರಿಗೊಳಿಸಿತ್ತು’ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಲಯದ ವಾರೆಂಟ್‌ ಆಧಾರದಲ್ಲಿ ಅನೂಪ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜನವರಿ 17ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.