ADVERTISEMENT

ಬೆಂಗಳೂರು| ಅರ್ಚಕರಿಗೆ ₹ 1.7 ಕೋಟಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 22:30 IST
Last Updated 20 ಜುಲೈ 2023, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ಮಠವೊಂದರ ಅರ್ಚಕ ರಾಘವೇಂದ್ರ ಆಚಾರ್ಯ ಅವರಿಂದ ₹ 1.7 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಶೇಷಗಿರಿ (45) ಎಂಬುವವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚೆನ್ನೈನ ಶೇಷಗಿರಿ, ಬಿ.ಕಾಂ ಪದವೀಧರ. ರಾಘವೇಂದ್ರ ಅವರು ನೀಡಿದ್ದ ದೂರಿನಲ್ಲಿ ಇತ್ತೀಚೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈತನನ್ನು ಬಂಧಿಸಿ ₹ 45 ಲಕ್ಷ ನಗದು ಹಾಗೂ ಆಸ್ತಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಮಿಳುನಾಡಿನ ಕಂಪನಿಯೊಂದರಲ್ಲಿ ಶೇಷಗಿರಿ ಕೆಲಸ ಮಾಡುತ್ತಿದ್ದ. ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಈತ, ಅಲ್ಲಿಯ ಕೆಲಸ ಬಿಟ್ಟು ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ. ಅರ್ಚಕ ರಾಘವೇಂದ್ರ ಅವರನ್ನು ಪರಿಚಯ ಮಾಡಿಕೊಂಡಿದ್ದ.’

ADVERTISEMENT

‘ರಾಘವೇಂದ್ರ ಅವರು ನಿವೇಶನ ಖರೀದಿಸಲು ಹಣ ಹೊಂದಿಸುತ್ತಿದ್ದರು. ಅದನ್ನು ತಿಳಿದಿದ್ದ ಆರೋಪಿ, ‘ನಿಮ್ಮ ಬಳಿ ಇರುವ ಹಣವನ್ನು ನನಗೆ ಕೊಡಿ. ಷೇರು ಮಾರುಕಟ್ಟೆ ಮೂಲಕ ಕೆಲವೇ ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇನೆ’ ಎಂದಿದ್ದ. ನಂತರ, ಹಂತ ಹಂತವಾಗಿ ₹ 1.7 ಕೋಟಿ ಪಡೆದುಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಷೇರು ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿತ್ತು. ಇದರಿಂದಾಗಿ ಆರೋಪಿ ನಗರದಿಂದ ಪರಾರಿಯಾಗಿದ್ದ. ಹಣ ಕಳೆದುಕೊಂಡಿದ್ದ ರಾಘವೇಂದ್ರ, ಠಾಣೆ ಮೆಟ್ಟಿಲೇರಿದ್ದರು. ಕೆಲ ಸುಳಿವು ಆಧರಿಸಿ ತನಿಖೆ ಕೈಗೊಂಡಾಗ, ಆರೋಪಿ ಸಿಕ್ಕಿಬಿದ್ದ’ ಎಂದು ಹೇಳಿವೆ.

ಆಸ್ತಿ ಖರೀದಿ: ‘ಅರ್ಚಕರಿಂದ ಹಣ ಪಡೆದಿದ್ದ ಆರೋಪಿ ಶೇಷಗಿರಿ, ಆಸ್ತಿ ಖರೀದಿ ಮಾಡಿದ್ದಾನೆ. ಈ ಸಂಗತಿ ಅರ್ಚಕರಿಗೆ ಗೊತ್ತಿರಲಿಲ್ಲ. ಅದೇ ಆಸ್ತಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.