ADVERTISEMENT

‘ಆಲ್‌ ಸೇಂಟ್ಸ್’ ಚರ್ಚ್‌ನಲ್ಲಿ ₹ 2.08 ಕೋಟಿ ದುರುಪಯೋಗ

ಫಾದರ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 21:54 IST
Last Updated 28 ಅಕ್ಟೋಬರ್ 2021, 21:54 IST

ಬೆಂಗಳೂರು: ನಗರದ ‘ಆಲ್ ಸೇಂಟ್ಸ್ ’ ಚರ್ಚ್‌ನಲ್ಲಿ ₹ 2.08 ಕೋಟಿ ದುರುಪಯೋಗ ನಡೆದಿರುವ ಆರೋಪ ಕೇಳಿಬಂದಿದ್ದು, ಚರ್ಚ್‌ನ ಫಾದರ್ ಸೇರಿ ನಾಲ್ವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಚರ್ಚ್ ಸದಸ್ಯ ಎಬೆನೇಜರ್ ಪ್ರೇಮ್‌ಕುಮಾರ್ ಎಂಬುವರು ದೂರು ನೀಡಿದ್ದಾರೆ. ಫಾದರ್ ರೆವರೆಂಡ್ ಸತೀಶ್ ತಿಮೋತಿ ಪೌಲ್, ಚರ್ಚ್ ಕಾರ್ಯದರ್ಶಿ ಹರಿನಾಥ್ ಕಾಂತನ್, ಖಜಾಂಚಿ ಸುದೀಪ್ ಫಿಲಿಪ್ ರಾಜ್ ಹಾಗೂ ಜೆರಾಲ್ಡ್ ಥಿಯೊಫಿಲೋಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2016ರ ಜೂನ್ 1ರಿಂದ 2021ರ ಮೇ 16ರವರೆಗೆ ಚರ್ಚ್ ಉಸ್ತುವಾರಿಯನ್ನು ಆರೋಪಿಗಳು ವಹಿಸಿಕೊಂಡಿದ್ದರು. ಚರ್ಚ್‌ನ ಆರ್ಥಿಕ ವ್ಯವಹಾರವನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಸಭಾಭವನದ ಬಾಡಿಗೆ, ಭದ್ರತಾ ಠೇವಣಿ, ವಿದ್ಯುತ್ ಬಿಲ್ ಹಾಗೂ ಕಟ್ಟಡ ನಿರ್ಮಾಣ ಯೋಜನೆ ಹೆಸರಿನಲ್ಲಿ ಹಣ ದುರುಪಯೋಗಪಡಿಸಿಕೊಂಡಿರುವುದಾಗಿ ದೂರುದಾರ ಆರೋಪಿಸಿದ್ದಾರೆ’ ಎಂದೂ ತಿಳಿಸಿವೆ.

ADVERTISEMENT

‘ಆರೋಪಿಗಳ ಕೃತ್ಯದಿಂದ ಚರ್ಚ್‌ನ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರ ಒತ್ತಾಯಿಸಿದ್ದಾರೆ. ಹಣ ದುರುಪಯೋಗ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿವೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫಾದರ್ ರೆವರೆಂಡ್ ಸತೀಶ್ ತಿಮೋತಿ ಪೌಲ್ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.