ADVERTISEMENT

ಪುರಾತನ ಪಾತ್ರೆ ಹೆಸರಿನಲ್ಲಿ ₹ 1.80 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 19:18 IST
Last Updated 8 ಸೆಪ್ಟೆಂಬರ್ 2020, 19:18 IST

ಬೆಂಗಳೂರು: ಪುರಾತನ ತಾಮ್ರದ ಪಾತ್ರೆಯೆಂದು ತೋರಿಸಿ, ಅದನ್ನು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆಂದು ನಂಬಿಸಿ ನಗರದ ಉದ್ಯಮಿಯೊಬ್ಬರಿಂದ ₹ 1.80 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆಗೀಡಾಗಿರುವ ದೊಡ್ಡನೆಕ್ಕುಂದಿ ನಿವಾಸಿ ಚಂದ್ರಶೇಖರ್ ರೆಡ್ಡಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳಾದ ನರಸಿಂಹ ರೆಡ್ಡಿ, ಗಜೇಂದ್ರ ಪ್ರಸಾದ್, ರವೀಂದ್ರ ಮತ್ತು ಮಲ್ಲಿಕಾರ್ಜುನ ರೆಡ್ಡಿ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಚಂದ್ರಶೇಖರ್ರ್, 2018ರಲ್ಲಿ ಸ್ನೇಹಿತರ ಜತೆ ಆಂಧ್ರಪ್ರದೇಶದ ಪುಣ್ಯಕ್ಷೇತ್ರವೊಂದಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಆರೋಪಿಗಳ ಪರಿಚಯ ಆಗಿತ್ತು. ತಾಮ್ರದ ಪಾತ್ರೆಯೊಂದನ್ನು ತೋರಿಸಿದ್ದ ಆರೋಪಿಗಳು, ‘ಇದು ಪುರಾತನ ಕಾಲದ ಪಾತ್ರೆ. ಇದನ್ನು ಪೂಜೆ ಮಾಡಿದರೆ ಬೇಗನೇ ಶ್ರೀಮಂತರಾಗಬಹುದು. ಪಾತ್ರೆಯನ್ನು ತಜ್ಞರಲ್ಲಿ ಪರೀಕ್ಷೆ ಮಾಡಿಸಿದ್ದು, ಇದರ ಮೌಲ್ಯ ₹ 200 ಕೋಟಿ ಆಗುತ್ತದೆ ಎಂಬುದು ಗೊತ್ತಾಗಿದೆ. ಯಾರಾದರೂ ಕಡಿಮೆ ಹಣ ಕೊಟ್ಟರೂ ಇದನ್ನು ಮಾರಾಟ ಮಾಡುತ್ತೇವೆ’ ಎಂದಿದ್ದರು. ಪಾತ್ರೆ ನೋಡಿ ಮರಳಿಸಿದ್ದ ಚಂದ್ರಶೇಖರ್ ವಾಪಸು ಊರಿಗೆ ಬಂದಿದ್ದರು.’

ADVERTISEMENT

’ಕೆಲ ದಿನದ ಬಳಿಕ ಚಂದ್ರಶೇಖರ್‌ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ಪಾತ್ರೆಯನ್ನು ಮತ್ತಷ್ಟು ಕಡಿಮೆ ಬೆಲೆಗೆ ಮಾರುವುದಾಗಿ ಹೇಳಿದ್ದರು. ಅದನ್ನು ನಂಬಿದ್ದ ಚಂದ್ರಶೇಖರ್, ತಮ್ಮ ಪತ್ನಿ ಹೆಸರಿನ ಆಸ್ತಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಆರೋಪಿಗಳಿಗೆ ಕೊಟ್ಟಿದ್ದರು. ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನೂ ನೀಡಿದ್ದರು. ಹಂತ ಹಂತವಾಗಿ ₹1.80 ಕೋಟಿ ಪಡೆದಿದ್ದ ಆರೋಪಿಗಳು, ಪಾತ್ರೆಯನ್ನು ಕೊಡದೇ ಸತಾಯಿಸುತ್ತಿದ್ದಾರೆ. ಹಣವನ್ನಾದರೂ ವಾಪಸು ನೀಡುವಂತೆ ಕೋರಿದಾಗ ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.