ADVERTISEMENT

ಚೆಕ್‌ ಬೌನ್ಸ್‌ ಪ್ರಕರಣ: ಶಿಕ್ಷೆ ಕಾಯಂ

‘ರುದ್ರಮದೇವಿ’ ಚಿತ್ರ ಬಿಡುಗಡೆಗೆ ಸಾಲ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 20:42 IST
Last Updated 19 ನವೆಂಬರ್ 2022, 20:42 IST

ಬೆಂಗಳೂರು: ‘ನಿರ್ಮಾಪಕ ಕೆ.ಮಂಜು ಅವರಿಂದ ಪಡೆದಿದ್ದ ₹ 20 ಲಕ್ಷ ಮೊತ್ತದ ಸಾಲಕ್ಕೆ ಪ್ರತಿಯಾಗಿ ನೀಡಿದ್ದ ಚೆಕ್‌ಗಳು ಬೌನ್ಸ್ ಆದ ಪ್ರಕರಣದಲ್ಲಿ,ತಕ್ಷಣ ಹಣ ಹಿಂದಿರುಗಿಸದೇ ಹೋದರೆ ಆರೋಪಿ ಕಿಶೋರ್‌ ಆರು ತಿಂಗಳ ಸಾದಾ ಜೈಲು ಶಿಕ್ಷೆಗೆ ಗುರಿಯಾಗಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೊಸಪೇಟೆಯ ಕಿಶೋರ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದು, ವಿಚಾರಣಾ ನ್ಯಾಯಾ ಲಯದ ಶಿಕ್ಷೆ ಕಾಯಂಗೊಳಿಸಿದೆ.

ಪ್ರಕರಣವೇನು?: ಕಿಶೋರ್ ಅವರು ‘ರುದ್ರಮದೇವಿ’ ತೆಲುಗು ಚಿತ್ರದ ಬಿಡುಗಡೆಗಾಗಿ ಕೆ.ಮಂಜು ಅವರಿಂದ 2015ರ ಜುಲೈನಲ್ಲಿ ₹ 20 ಲಕ್ಷ ಕೈಗಡ ಪಡೆದು ಮುಂದಿನ ಎರಡು ತಿಂಗಳಲ್ಲಿ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡು ಚೆಕ್‌ಗಳನ್ನು ನೀಡಿದ್ದರು.

ADVERTISEMENT

ಅವಧಿ ಮೀರಿದರೂ ಕಿಶೋರ್ ಹಣ ಹಿಂದಿರುಗಿಸಿರಲಿಲ್ಲ. ಈ ಸಂಬಂಧ ಮಂಜು ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು. ಎನ್‌.ಐ ಕಾಯ್ದೆ–1881ರ ಕಲಂ 138ರ ಅನುಸಾರ ಕಿಶೋರ್ ತಪ್ಪಿತಸ್ಥರು ಎಂದು ವಿಚಾರಣಾ ನ್ಯಾಯಾಲಯ ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಕಿಶೋರ್ 69ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.