ADVERTISEMENT

ಚೆಗ್‌ ಜಾಗತಿಕ ವಿದ್ಯಾರ್ಥಿ ಸ್ಪರ್ಧೆ: ಅಂತಿಮ ಸುತ್ತಿನಲ್ಲಿ ನಗರದ ದಿವಾ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 16:14 IST
Last Updated 6 ಸೆಪ್ಟೆಂಬರ್ 2024, 16:14 IST
ದಿವಾ ಉತ್ಕರ್ಷ
ದಿವಾ ಉತ್ಕರ್ಷ   

ಬೆಂಗಳೂರು: ಬ್ರಿಟನ್‌ನ ಚೆಗ್‌ ಸಂಸ್ಥೆಯ ‘ಜಾಗತಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸ್ಪರ್ಧೆ’ಯ ಅಂತಿಮ 10 ಮಂದಿಯ ಪಟ್ಟಿಯಲ್ಲಿ ಬೆಂಗಳೂರಿನ ದಿವಾ ಉತ್ಕರ್ಷ ಸ್ಥಾನ ಪಡೆದಿದ್ದಾರೆ.

ದಿವಾ ಅವರು ನ್ಯಾಷನಲ್‌ ಅಕಾಡೆಮಿ ಫಾರ್ ಲರ್ನಿಂಗ್‌ನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದಾರೆ. ದಿವಾ 13 ವರ್ಷದವರಾಗಿದ್ದಾಗ ಸೋದರ ಸೂರ್ಯ ಅವರಿಗೆ 2021ರಲ್ಲಿ ಮಧುಮೇಹ ಟಿ–1 ಪತ್ತೆಯಾಯಿತು. ಆಗ, ಆತ ಪಟ್ಟ ಸಂಕಟವನ್ನು ಕಂಡ ದಿವಾ, ಎಲ್ಲರಿಗೂ ಜೀವರಕ್ಷಕ ಇನ್ಸುಲಿನ್‌ ಲಭ್ಯವಾಗಬೇಕು, ಅರಿವು ಮೂಡಿಸಬೇಕು ಎಂದು ನಿರ್ಧರಿಸಿದರು. ‘ಪ್ರಾಜೆಕ್ಟ್ ಸೂರ್ಯ’ ಆರಂಭಿಸಿ, ಬಡ ಮಕ್ಕಳಿಗೆ ಮಧುಮೇಹದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

85 ಸ್ವಯಂ ಸೇವಕರನ್ನು ಹೊಂದಿರುವ ‘ಪ್ರಾಜೆಕ್ಟ್‌ ಸೂರ್ಯ’, 4.5 ಲಕ್ಷ ಜನರನ್ನು ತಲುಪಿದೆ. ಮಧುಮೇಹದ ಬಗ್ಗೆ ಅರಿವು ಮೂಡಿಸುವ ಜೊತೆಗೆ ₹12.50 ಲಕ್ಷಗಳನ್ನು ದೇಣಿಗೆಯಾಗಿ ಸಂಗ್ರಹಿಸಿ, ದೇಶದ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. 900ಕ್ಕೂ ಹೆಚ್ಚು ಮಕ್ಕಳಿಗೆ 6 ಸಾವಿರ ಇನ್ಸುಲಿನ್‌, ಗ್ಲುಕೋಸ್‌ ಸ್ಟ್ರಿಪ್ಸ್‌, ಸಿರಿಂಜ್‌ಗಳನ್ನು ಒದಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಪ್ರಾಜೆಕ್ಟ್‌ ಸೂರ್ಯ’ವನ್ನು ಜಾಗತಿಕ ಮಟ್ಟದಲ್ಲಿ ಹಲವು ಚಾಪ್ಟರ್‌ಗಳಲ್ಲಿ ವಿಸ್ತರಿಸಬೇಕೆಂಬ ಅಭಿಲಾಷೆಯನ್ನು ದಿವಾ ಹೊಂದಿದ್ದಾರೆ. ಐದು ದಶಲಕ್ಷ ಜನರಿಗೆ ನೇರವಾಗಿ ತೆರಿಗೆರಹಿತ ಇನ್ಸುಲಿನ್‌ ಅನ್ನು ಕಾರ್ಪೊರೇಟ್‌ ಕಂಪನಿಗಳ ಮೂಲಕ ನಿಧಿ ಸಂಗ್ರಹಿಸಿ ಒದಗಿಸಬೇಕೆಂಬ ಗುರಿಯನ್ನು ಅವರು ಹೊಂದಿದ್ದಾರೆ.

ಚೆಗ್‌ ಸ್ಪರ್ಧೆಗೆ 176 ದೇಶಗಳಿಂದ 11 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಅಂತಿಮ ಸುತ್ತಿಗೆ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಸಂಸ್ಥೆಗೆ ₹1 ಲಕ್ಷ ಡಾಲರ್‌ ಬಹುಮಾನ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.