ಹೈಕೋರ್ಟ್
ಬೆಂಗಳೂರು: ‘ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿಕೊಳ್ಳುವಾಗ ನೀಡುವ ನೋಟಿಸ್‌ನಲ್ಲಿ ಕ್ರೈಂ ನಂಬರ್, ಎಫ್‌ಐಆರ್ ಪ್ರತಿ, ಅಪರಾಧ ಏನು ಎಂಬ ಬಗೆಗಿನ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್ ಲಿಸ್ಟ್ ಅನ್ನು ಕಡ್ಡಾಯವಾಗಿ ಒದಗಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಡಿಜಿ–ಐಜಿಪಿ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
‘ಅಮೃತಹಳ್ಳಿ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೊಬೈಲ್ ಫೋನ್‌ನಲ್ಲಿ ವಾಟ್ಸ್ ಆ್ಯಪ್ ಮೂಲಕ, ನಾಳೆ ನೀವು ಠಾಣೆಗೆ ಹಾಜರಾಗಬೇಕು’ ಎಂದು ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್.ಶಿವಪ್ರಸಾದ್ ಸಲ್ಲಿಸಿದ್ದ ರಿಟ್ ಅರ್ಜಿ (ಡಬ್ಲ್ಯೂ.ಪಿ.15125/2024 ಜಿಎಂ–ಆರ್‌ಇಎಸ್) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ ಕಲಂ 35ರ ಅನುಸಾರ ಆರೋಪಿಗೆ ಚೆಕ್ ಲಿಸ್ಟ್ ಒದಗಿಸದೇ ಹೋದಲ್ಲಿ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ’ ಎಂದೂ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಪ್ರಕರಣವೇನು?: ‘ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಮಯ ಟಿ.ವಿ ಚಾನಲ್‌ನ ಸಿಇಒ ವಿಜಯ್ ಟಾಟಾ ನೀಡಿದ ದೂರಿನ ಅನುಸಾರ ಅಮೃತಹಳ್ಳಿ ಠಾಣೆಯ ಪೊಲಿಸರು ಟಿ.ಆರ್.ಶಿವಪ್ರಸಾದ್‌ಗೆ ಮೊಬೈಲ್ ಫೋನ್‌ನಲ್ಲಿ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಿ, ‘ನಾಳೆ ನೀವು ಠಾಣೆಗೆ ಹಾಜರಾಗಬೇಕು’ ಎಂದು ಶಿವಪ್ರಸಾದ್‌ಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.