ADVERTISEMENT

ಚಿಕ್ಕನಾಗಮಂಗಲ ಘಟಕಕ್ಕೆ ಹಸಿ ಕಸ ಬೇಡ

ಮಾಲಿನ್ಯ ನಿಯಂತ್ರಣ ನಿಯಮ ಪಾಲನೆಯಾಗಿಲ್ಲ: ಅಧಿಕಾರಿಗಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:30 IST
Last Updated 30 ಜೂನ್ 2019, 19:30 IST
ಚಿಕ್ಕನಾಗಮಂಗಲದ ಕಸ ಸಂಸ್ಕರಣಾ ಘಟಕಕ್ಕೆ ನಿವೃತ್ತ ನ್ಯಾ.ಸುಭಾಷ್‌ ಬಿ ಅಡಿ ನೇತೃತ್ವದ ರಾಜ್ಯಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು
ಚಿಕ್ಕನಾಗಮಂಗಲದ ಕಸ ಸಂಸ್ಕರಣಾ ಘಟಕಕ್ಕೆ ನಿವೃತ್ತ ನ್ಯಾ.ಸುಭಾಷ್‌ ಬಿ ಅಡಿ ನೇತೃತ್ವದ ರಾಜ್ಯಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು   

ಬೆಂಗಳೂರು:ಚಿಕ್ಕನಾಗಮಂಗಲದ ಕಸ ನಿರ್ವಹಣಾ ಘಟಕಕ್ಕೆ ಹಸಿ ಕಸ ಪೂರೈಸುವುದನ್ನು ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ಮೇರೆಗೆ ರಚಿಸಿರುವ ‘ರಾಜ್ಯಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ’ಯು ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದ ಬಳಿ ಇರುವ ಈ ಘಟಕಕ್ಕೆ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಆಡಿ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಹಸಿ ಕಸವನ್ನು ಸಂಸ್ಕರಿಸುವ ವೇಳೆ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತಿದ್ದು, ಇದರಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ, ಇಲ್ಲಿ ಹಸಿ ಕಸ ತರಬಾರದು’ ಎಂದು ನ್ಯಾ. ಆಡಿ ಅವರು ಬಿಬಿಎಂಪಿಗೆ ನಿರ್ದೇಶನ ನೀಡಿದರು.

ADVERTISEMENT

‘ದಕ್ಷಿಣ ವಲಯದ 44 ವಾರ್ಡ್‌ಗಳ ಮಿಶ್ರ ಕಸವನ್ನು ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಆಯಾ ವಾರ್ಡ್‌ಗಳಲ್ಲಿಯೇ ಈ ಕಸವನ್ನು ವಿಲೇವಾರಿ ಮಾಡುವಂತಾಗಬೇಕು’ ಎಂದು ಅಧಿಕಾರಿಗಳು ಸಮಿತಿಯ ಗಮನಕ್ಕೆ ತಂದರು. ಈ ಸಮಸ್ಯೆ ಕುರಿತು ಚರ್ಚಿಸಲು ದಕ್ಷಿಣ ವಲಯದ ಅಧಿಕಾರಿಗಳ ಸಭೆಯನ್ನು ಮುಂದಿನ ವಾರ ಏರ್ಪಡಿಸಲು ನಿರ್ಧರಿಸಲಾಯಿತು.

‘ದಕ್ಷಿಣ ವಲಯದ 44 ವಾರ್ಡ್‌ಗಳಲ್ಲಿ ಕಸವನ್ನು ಸಂಸ್ಕರಿಸುವ ವ್ಯವಸ್ಥೆ ಇಲ್ಲ. ಹೀಗಾಗಿ, ಈ ಘಟಕಕ್ಕೆ ಕಸ ತರಲಾಗುತ್ತಿದೆ. ಆದರೆ, ಈ ಘಟಕವು ಕೇವಲ 500 ಟನ್‌ನಷ್ಟು ಕಸವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಆದರೆ, ಇದಕ್ಕಿಂತ ಹೆಚ್ಚು ಕಸವನ್ನು ತರಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಪ್ರಣಯ್‌ ದುಬೆ ಹೇಳಿದರು.

ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿದ ಸಂದರ್ಭ, ಸಾವಿರಾರು ಟನ್‌ಗಳಷ್ಟು ಕಸವನ್ನು ಘಟಕದ ಆಚೆ ರಾಶಿ ಹಾಕಲಾಗಿತ್ತು. ಕಸದ ಜೊತೆ ಸೇರಿಕೊಂಡಿದ್ದ ಪ್ಲಾಸ್ಟಿಕ್‌ ಅನ್ನು ಪಕ್ಕದ ಗುಂಡಿಗಳಲ್ಲಿ ಸುಡಲಾಗಿತ್ತು.

‘ಘಟಕದಲ್ಲಿ ಮಾಲಿನ್ಯ ನಿಯಂತ್ರಣ ನಿಯಮಗಳ ಪಾಲನೆ ಸಮರ್ಪಕವಾಗಿ ನಡೆದಿಲ್ಲ’ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಹೇಳಿದರು.

‘ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನುಫ್ರಾನ್ಸ್‌ನ ಕಂಪನಿಯೊಂದರ ಸಹಭಾಗಿತ್ವದಲ್ಲಿ ಇನ್ನು ಎರಡು ತಿಂಗಳಲ್ಲಿ ಇಲ್ಲಿ ಸ್ಥಾಪಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.

ಚಿಕ್ಕನಾಗಮಂಗಲದ ಘಟಕದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿ ಸ್ಥಳೀಯರು ಎನ್‌ಜಿಟಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ಇಲ್ಲಿಗೆ ಭೇಟಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.