ADVERTISEMENT

ಆಶಾ ಕಾರ್ಯಕರ್ತೆಯರ ಸೇವೆ ನಗರ ಪ್ರದೇಶಕ್ಕೂ ವಿಸ್ತರಿಸಿ: ಶಶಿಧರ ಕೋಸಂಬೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 14:00 IST
Last Updated 18 ನವೆಂಬರ್ 2025, 14:00 IST
ಶಶಿಧರ ಕೋಸಂಬೆ
ಶಶಿಧರ ಕೋಸಂಬೆ   

ಬೆಂಗಳೂರು: ‘ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಆಶಾ ಕಾರ್ಯಕರ್ತೆಯರನ್ನು ನಗರ ಪ್ರದೇಶಗಳಲ್ಲೂ ನೇಮಿಸಿಕೊಳ್ಳಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷ ಶಶಿಧರ ಕೋಸಂಬೆ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಮುದಾಯ ಹಾಗೂ ಆರೋಗ್ಯ ಕೇಂದ್ರಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲು ಕಾರ್ಯಕರ್ತರು ಇಲ್ಲದಂತಾಗಿದೆ’ ಎಂದಿದ್ದಾರೆ.

‘ಸಾಂಪ್ರದಾಯಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಮತ್ತು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಆಶಾ ಕಾರ್ಯಕರ್ತೆಯರ ಕೊಡುಗೆ ಮಹತ್ವದ್ದಾಗಿದೆ. ಇವರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳ ಮಾದರಿಯಲ್ಲಿಯೇ ನಗರ ಪ್ರದೇಶಗಳಲ್ಲೂ ಆಶಾ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಕೈಗೊಂಡ ಕ್ರಮದ ಕುರಿತು ಆಯೋಗಕ್ಕೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಸಮುದಾಯ ಆರೋಗ್ಯ, ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅದರ ಜೊತೆಗೆ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.