ADVERTISEMENT

ಮನೆಯಲ್ಲಿ ಹೊತ್ತಿದ ಬೆಂಕಿಗೆ ಹೊಗೆ ಆವರಿಸಿ ಉಸಿರುಗಟ್ಟಿ ಮಕ್ಕಳಿಬ್ಬರ ದುರ್ಮರಣ

ಅಣ್ಣ– ತಂಗಿಯನ್ನು ಮನೆಯೊಳಗೇ ಬಿಟ್ಟು, ಬೀಗ ಹಾಕಿಕೊಂಡು ಹೋಗಿದ್ದ ಪೋಷಕರು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:47 IST
Last Updated 11 ನವೆಂಬರ್ 2018, 19:47 IST
ಸೃಜನ್, ಲಕ್ಷ್ಮಿ
ಸೃಜನ್, ಲಕ್ಷ್ಮಿ   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಸಾಪುರ ಬಳಿಯ ‘ಪ್ಯಾರಾಡೈಸ್‌’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದ್ದರಿಂದಾಗಿ, ಮನೆಯೊಳಗಿದ್ದ ಮಕ್ಕಳಿಬ್ಬರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.

ಅಪಾರ್ಟ್‌ಮೆಂಟ್‌ ಸಮುಚ್ಚಯದ ಸೆಕ್ಯುರಿಟಿ ಗಾರ್ಡ್‌ ಆಗಿದ್ದ ದೇವೇಂದ್ರ ಹಾಗೂ ರೂಪಸಿ ದಂಪತಿಯ ಮಕ್ಕಳಾದ ಸೃಜನ್ (5) ಹಾಗೂ ಲಕ್ಷ್ಮಿ (2) ಮೃತರು. ಮನೆಯೊಳಗಿದ್ದ ಮಕ್ಕಳಿಬ್ಬರ ಶವಗಳನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದ ಎಲೆಕ್ಟ್ರಾನಿಕ್ ಸಿಟಿಯ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

‘ನೇಪಾಳದ ದೇವೇಂದ್ರ, ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ಒಂದೂವರೆ ವರ್ಷದ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಅವರಿಗೆ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸ ಸಿಕ್ಕಿತ್ತು. ಅದರ ತಳ ಮಹಡಿಯ ಮನೆಯಲ್ಲಿ ದಂಪತಿ ಉಳಿದುಕೊಂಡಿದ್ದರು. ರೂಪಸಿ, ಮನೆಗೆಲಸಕ್ಕೆ ಹೋಗುತ್ತಿದ್ದರು’ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹೇಳಿದರು.

ADVERTISEMENT

ಬಾಗಿಲು ಹಾಕಿದ ಮನೆಯೊಳಗಿದ್ದ ಅಣ್ಣ–ತಂಗಿ: ‘ಬಾಲಕ ಸೃಜನ್, ಸ್ಥಳೀಯ ಶಾಲೆಯಲ್ಲಿ ಓದುತ್ತಿದ್ದ. ಭಾನುವಾರ ರಜೆ ಇದ್ದಿದ್ದರಿಂದ ಮನೆಯಲ್ಲೇ ತಂಗಿ ಜೊತೆಯಲ್ಲಿ ಆಟವಾಡುತ್ತಿದ್ದ. ಕೆಲಸಕ್ಕೆ ಹೋಗಲು ಸಮಯವಾಗಿದ್ದರಿಂದ ದಂಪತಿ ಅವರಿಬ್ಬರನ್ನು ಮನೆಯೊಳಗೇ ಇರುವಂತೆ ಹೇಳಿ ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋಗಿದ್ದರು. ಮನೆಯ ಕಿಟಕಿಯನ್ನು ಸಹ ತೆರೆದಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಬೆಳಿಗ್ಗೆ 8ಕ್ಕೆ ಪೋಷಕರು ಮನೆಯಿಂದ ಹೊರ ಹೋಗುತ್ತಿದ್ದಂತೆ ಅಣ್ಣ–ತಂಗಿ, ಬೆಂಕಿ ಪೊಟ್ಟಣ ಹಿಡಿದುಕೊಂಡು ಆಟವಾಡುತ್ತಿದ್ದರು. ಅದೇ ವೇಳೆ ಕಡ್ಡಿ ಗೀರಿದ್ದಾರೆ ಎನ್ನಲಾಗಿದೆ. ಅದರಿಂದಾಗಿ ಮನೆಯಲ್ಲಿದ್ದ ಹಾಸಿಗೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಕೆಲವೇ ನಿಮಿಷಗಳಲ್ಲೇ ಹಾಸಿಗೆಗಳು ಸುಟ್ಟು ಮನೆಯಲ್ಲೆಲ್ಲ ಹೊಗೆ ಆವರಿಸಿಕೊಂಡಿತ್ತು. ಅದರಿಂದ ಉಸಿರಾಡಲು ಸಾಧ್ಯವಾಗದೇ ಮಕ್ಕಳು, ಮನೆಯೊಳಗೇ ಮೃತಪಟ್ಟಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೆಲಸ ಮುಗಿಸಿ ಮನೆಗೆ ವಾಪಸ್‌ ಬಂದಾಗಲೇ ವಿಷಯ ಗೊತ್ತಾಯಿತು ಎಂದು ದಂಪತಿ ಹೇಳಿಕೆ ಕೊಟ್ಟಿದ್ದಾರೆ’ ಎಂದರು.

‘ಮನೆಯ ಅಕ್ಕ– ಪಕ್ಕದಲ್ಲಿ ನಿರ್ಜನ ಪ್ರದೇಶವಿದೆ. ಮಕ್ಕಳನ್ನು ಆಟವಾಡಲು ಹೊರಗೆ ಕಳುಹಿಸಿದರೆ ಏನಾದರೂ ಆಗಬಹುದು ಎಂಬ ಭಯವಿತ್ತು. ಹೀಗಾಗಿ, ನಿತ್ಯವೂ ಕೆಲಸಕ್ಕೆ ಹೋಗುವ ಮುನ್ನ ಮಕ್ಕಳನ್ನು ಮನೆಯೊಳಗೇ ಇರಿಸಿ ಬೀಗ ಹಾಕಿಕೊಂಡು ಹೋಗುತ್ತಿದ್ದೆವು ಎಂದು ದಂಪತಿ ಹೇಳಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.