ADVERTISEMENT

ಬೆಂಗಳೂರು: ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ- 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 14:15 IST
Last Updated 21 ಸೆಪ್ಟೆಂಬರ್ 2023, 14:15 IST
   

ಬೆಂಗಳೂರು: ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಅಪರಾಧಿ ವಿಷ್ಣು (24) ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ.

ಬಾಗಲಗುಂಟೆ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶೆ ರೂಪಾ ಕೆ.ಎನ್ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದಿಸಿದ್ದರು.

‘17 ವರ್ಷದ ಬಾಲಕಿ, ಕಾಲೇಜು ವ್ಯಾಸಂಗ ಮಾಡುತ್ತಿದ್ದಳು. ಟಿ. ದಾಸರಹಳ್ಳಿ ನಿವಾಸಿ ವಿಷ್ಣು, ಬಾಲಕಿಯನ್ನು ಹಿಂಬಾಲಿಸುತ್ತಿದ್ದ. ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ರಸ್ತೆಯಲ್ಲಿ ಬಾಲಕಿಯನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘2019ರ ಮೇ 21ರಂದು ಬಾಲಕಿಯನ್ನು ಅಪಹರಿಸಿ ಆಟೊದಲ್ಲಿ ಕರೆದೊಯ್ದಿದ್ದ ಆರೋಪಿ, ಮನೆಯೊಂದರಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದ. ಅದೇ ಸಂದರ್ಭದಲ್ಲಿ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಮಗಳ ಮೇಲಾದ ಲೈಂಗಿಕ ದೌರ್ಜನ್ಯ ಸಂಬಂಧ ತಂದೆ ದೂರು ನೀಡಿದ್ದರು.’

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಎಂ. ಕುಮಾರ್, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.