ADVERTISEMENT

ಮಗು ಅಪಹರಿಸಿ ₹80 ಸಾವಿರಕ್ಕೆ ಮಾರಾಟ

ವಿ.ವಿ.ಪುರ ಪೊಲೀಸರ ಕಾರ್ಯಾಚರಣೆ * ಮಹಿಳೆ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 16:05 IST
Last Updated 20 ನವೆಂಬರ್ 2020, 16:05 IST
ಆಯಿಷಾ
ಆಯಿಷಾ   

ಬೆಂಗಳೂರು: ವಾಣಿ ವಿಲಾಸ್ ಆಸ್ಪತ್ರೆಯಲ್ಲಿದ್ದ ಎರಡು ದಿನದ ಮಗುವನ್ನು ಅಪಹರಿಸಿ ₹ 80 ಸಾವಿರಕ್ಕೆ ಮಾರಾಟ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ.

‘ಮಗು ಮಾರಿದ್ದ ಯಲಚೇನಹಳ್ಳಿ ನಿವಾಸಿ ಆಯೆಷಾ (23), ಕನಕನಗರದ ಮಂಜು ಲೇಔಟ್‌ನ ವಸೀಂಪಾಷಾ (30) ಹಾಗೂ ಮಗು ಖರೀದಿಸಿದ್ದ ಅಬ್ದುಲ್ ರೆಹಮಾನ್ (32), ಅವರ ಪತ್ನಿ ಸಾನಿಯಾ (22) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಪೊಲೀಸರು ಹೇಳಿದರು.

‘ವಿಜಿನಾಪುರದ ನಿವಾಸಿ ಆರ್ಷಿಯಾ (27) ಎಂಬುವರು ನವೆಂಬರ್ 9ರಂದು ಹೆರಿಗೆಗೆಂದು ವಾಣಿ ವಿಲಾಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಆ ಮಗುವನ್ನು ಅಪಹರಣ ಮಾಡಲಾಗಿತ್ತು. ಆ ಬಗ್ಗೆ ಮಗುವಿನ ತಂದೆ ದೂರು ನೀಡಿದ್ದರು’ ಎಂದೂ ಅವರು ತಿಳಿಸಿದರು.

ADVERTISEMENT

ತಂಗಿ ನೋಡಲು ಬಂದು ಅಪಹರಣ: ‘ಆರೋಪಿ ಆಯೆಷಾ ತಂಗಿಯೂ ಹೆರಿಗೆಗೆಂದು ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲು ಆಯೆಷಾ ಆಸ್ಪತ್ರೆಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಆಸ್ಪತ್ರೆಯಿಂದ ವಾಪಸು ತೆರಳುವಾಗ ತೀವ್ರ ನಿಗಾ ಘಟಕದೊಳಗೆ ಆಯೆಷಾ ಹೋಗಿದ್ದರು. ಅದೇ ವೇಳೆ ಆರ್ಷಿಯಾ ಅವರ ಮಗು ಬಳಿ ಹೋಗಿದ್ದ ಆರೋಪಿ, ‘ನಾನು ಈ ಮಗುವಿನ ಚಿಕ್ಕಮ್ಮ. ಮಗುವನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಹೇಳಿದ್ದರು. ಅದು ನಿಜವೆಂದು ತಿಳಿದ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಕೊಟ್ಟು ಕಳುಹಿಸಿದ್ದರು. ಕೆಲ ಸಮಯದ ನಂತರವೇ ಮಗು ಅಪಹರಣವಾದ ಸಂಗತಿ ಪೋಷಕರಿಗೆ ಗೊತ್ತಾಗಿತ್ತು’ ಎಂದೂ ತಿಳಿಸಿದರು.

‘ಮಗುವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದ ಆರೋಪಿ, ಅಬ್ದುಲ್ ರೆಹಮಾನ್ ಹಾಗೂ ಸಾನಿಯಾ ಫಾತಿಮಾ ದಂಪತಿಗೆ ಮಾರಾಟ ಮಾಡಿ ₹ 80 ಸಾವಿರ ಪಡೆದಿದ್ದರು. ಕೃತ್ಯಕ್ಕೆ ವಸೀಂಪಾಷಾ ಸಹಕಾರ ನೀಡಿದ್ದರು. ಇತ್ತ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದ ವಿಶೇಷ ತಂಡಕ್ಕೆ ಆರೋಪಿ ಸುಳಿವು ಸಿಕ್ಕಿತ್ತು. ಆಯೆಷಾ ಅವರನ್ನು ಬಂಧಿಸಿ, ನಂತರ ದಂಪತಿಯನ್ನೂ ಸೆರೆ ಹಿಡಿಯಲಾಯಿತು. ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಪೋಷಕರ ಸುಪರ್ದಿಗೆ ವಹಿಸಲಾಗಿದೆ’ ಎಂದೂ ಹೇಳಿದರು.

‘ಪತಿ ಜೊತೆ ಆಯೆಷಾ ವಾಸವಿದ್ದರು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆ ಆಗಿತ್ತು. ಜೀವನ ನಡೆಸುವುದು ಕಷ್ಟವಾಗಿತ್ತು. ಅದೇ ಕಾರಣಕ್ಕೆ ಮಗುವನ್ನು ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದರು’ ಎಂದೂ ಪೊಲೀಸರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.