ADVERTISEMENT

ಬಾಲಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯ ಕಸಿಯದಿರಲಿ: ಚೈಲ್ಡ್‌ ರೈಟ್ಸ್‌ ಟ್ರಸ್ಟ್‌

​ಪ್ರಜಾವಾಣಿ ವಾರ್ತೆ
Published 29 ಮೇ 2021, 20:49 IST
Last Updated 29 ಮೇ 2021, 20:49 IST

ಬೆಂಗಳೂರು: ‘ಬಡತನದಿಂದ ನೂರಾರು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಕೋವಿಡ್‌ನಿಂದ ಶಾಲೆಗಳು ಮುಚ್ಚಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಕಾನೂನು ದುರ್ಬಲವಾಗಿರುವುದರಿಂದ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸುವುದು ಹಾಗೂ ಕಾನೂನುಗಳನ್ನು ಬಲಗೊಳಿಸುವುದೇ ಇದರ ನಿರ್ಮೂಲನೆಗೆ ಇರುವ ತಂತ್ರ.’

ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಹಾಗೂ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ ರಾಜ್ಯ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಮಕ್ಕಳ ಪ್ರತಿನಿಧಿಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನೀಡಿದ ಒಕ್ಕೊರಲ ಸಲಹೆಗಳಿವು.

‘ಕೊಳೆಗೇರಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರಾಗುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಕುರಿತು ಪೋಷಕರಿಗೆ ಅರಿವು ಮೂಡಿಸಬೇಕು’ ಎಂದು ಬೀದರ್‌ ಜಿಲ್ಲೆಯ ಸಂಗಮೇಶ್‌ ಸಲಹೆ ನೀಡಿದರು.

ADVERTISEMENT

ರಾಷ್ಟ್ರೀಯ ಬಾಲಕಾರ್ಮಿಕ ವಿರೋಧಿ ಆಂದೋಲನದ ಮುಖ್ಯಸ್ಥ ಮ್ಯಾಥ್ಯು ಫಿಲಿಪ್, ‘ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು ಹಾಗೂ ಅದರ ತಡೆಗೆ ಮಕ್ಕಳಿಂದಲೇ ಸಲಹೆಗಳನ್ನು ಸಂಗ್ರಹಿಸುತ್ತಿದ್ದೇವೆ. ಜೂನ್ 21ರ ಅಂತರರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಂದು ಈ ಎಲ್ಲ ಸಲಹೆಗಳು, ತುರ್ತಾಗಿ ತೆಗೆದುಕೊಳ್ಳಬೇಕಿರುವ ಕ್ರಮಗಳನ್ನು ಸರ್ಕಾರಗಳ ಮುಂದಿಡಲಾಗುವುದು’ ಎಂದರು.

ಆಂದೋಲನದ ರಾಜ್ಯ ಸಂಚಾಲಕ ವಾಸುದೇವ ಶರ್ಮ,‘18 ವರ್ಷದೊಳಗಿನ ಮಕ್ಕಳು ಕೆಲಸಗಳಲ್ಲಿ ತೊಡಗುವುದು ಅಪರಾಧ. ಆದರೆ, ದೇಶದಲ್ಲಿ ಈ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಇನ್ನೂ ಸಾಧ್ಯವಾಗಿಲ್ಲ’ ಎಂದರು.

ರಾಜ್ಯ ಸಂಘಟಕ ನಾಗಸಿಂಹ ಜಿ.ರಾವ್‌ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.