ADVERTISEMENT

ಬಾಲ್ಯವಿವಾಹ ಆರೋಪ: ನಿರೀಕ್ಷಣಾ ಜಾಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:55 IST
Last Updated 3 ಜೂನ್ 2022, 19:55 IST

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಳೆದ ವರ್ಷ ನಡೆದ ಬಾಲ್ಯವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ವರನ ತಂದೆ ಮತ್ತು ತಾಯಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಈ ಸಂಬಂಧ ಪಾತಪಾಳ್ಯ ಹೋಬಳಿಯ ನಂದಪ್ಪಗಾರಪಲ್ಲಿಯ ಗುಳ್ಳಪ್ಪ ಮತ್ತು ಲಕ್ಷ್ಮೀದೇವಮ್ಮ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯಾವುದೇ ಆರೋಪಗಳು ಇಲ್ಲದಿರುವ ಕಾರಣ, ದಂಪತಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಪ್ರಕರಣವೇನು?: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ನಂದಪ್ಪಗಾರಪಲ್ಲಿಯಲ್ಲಿ ಒಂದು ವರ್ಷದ ಹಿಂದೆ ಬಾಲ್ಯವಿವಾಹ ಪ್ರಕರಣ ವರದಿಯಾಗಿತ್ತು. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕ ಆದಿನಾರಾಯಣಪ್ಪ, 11 ವರ್ಷದ ಬಾಲಕಿಯನ್ನು ಗ್ರಾಮದ ಗುಳ್ಳಪ್ಪ ಮತ್ತು ಲಕ್ಷ್ಮೀದೇವಮ್ಮ ದಂಪತಿ ತಮ್ಮ ಪುತ್ರನಿಗೆ ವಿವಾಹ ಮಾಡಿಸಿದ್ದಾರೆಂದು ದೂರು ನೀಡಲಾಗಿತ್ತು.ಪ್ರಕರಣ ದಾಖಲಿಸಿಕೊಂಡಿದ್ದ ಗುಡಿಬಂಡೆ ಪೊಲೀಸರು ತನಿಖೆ ಕೈಗೊಂಡು ಗುಳ್ಳಪ್ಪ ಮತ್ತು ಲಕ್ಷ್ಮೀದೇವಮ್ಮ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.