ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ (ಎಡದಿಂದ ಕುಳಿತವರು) ಶೋಭಾ ಮನ್ವೆಲ್ ಕಿಣಗಿ ಮತ್ತು ಸುಶೀಲಾ ವಿ., ಅವರಿಗೆ ‘ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಜಾತಿ, ವಲಸೆ, ಅಸಮರ್ಪಕ ಶಾಲಾ ಸೌಲಭ್ಯಗಳಿಂದ ದೇಶದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. 2024ರ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ವರದಿಯ ಪ್ರಕಾರ ಭಾರತದಲ್ಲಿ 20 ಕೋಟಿ ಬಾಲ್ಯ ವಿವಾಹಗಳು ನಡೆದಿವೆ’ ಎಂದು ಅಭಿವೃದ್ಧಿ ಸಲಹೆಗಾರ್ತಿ ಸುಧಾ ಮುರಳಿ ಹೇಳಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್‌ಟಿ) ಸೋಮವಾರ ಆಯೋಜಿಸಿದ್ದ ‘ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಪ್ರಶಸ್ತಿ, ಫೆಲೋಶಿಪ್ ಪ್ರದಾನ ಹಾಗೂ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶ ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ, ಲಿಂಗ ಅಸಮಾನತೆ, ಬಾಲಕಾರ್ಮಿಕ ಪದ್ಧತಿ ಇಂದಿಗೂ ಜಾರಿಯಲ್ಲಿವೆ. ಸರ್ಕಾರ ಹಾಗೂ ಸ್ವಯಂ ಸೇವಾ ಸಂಘಗಳು ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಿಸಲು ಸರ್ಕಾರ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಬೇಕು’ ಎಂದು ಹೇಳಿದರು.
‘ದೇಶದಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳ ಕಲಿಕಾ ಗುಣಮಟ್ಟ ಕೆಳಮಟ್ಟದಲ್ಲಿದೆ. ಕಳೆದ ಒಂದು ದಶಕದಲ್ಲಿ ಬಾಲ್ಯ ವಿವಾಹ, ಮನೆಗೆಲಸ, ಶಿಕ್ಷಣದ ವೆಚ್ಚ ಹೆಚ್ಚಳ ಮತ್ತು ಹದಿಹರೆಯದವರ ಗರ್ಭಧಾರಣೆಯಂತಹ ಸಮಸ್ಯೆಗಳಿಂದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ತೊರೆದಿದ್ದಾರೆ’ ಎಂದರು.
ಸಾಮಾಜಿಕ ಕಾರ್ಯಕರ್ತೆಯರಾದ ಬೆಳಗಾವಿ ಜಿಲ್ಲೆಯ ಸುಶೀಲಾ ವಿ., ಶೋಭಾ ಮಾನ್ವೆಲ್ ಕಿಣಗಿ ಅವರಿಗೆ ‘ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಪ್ರಶಸ್ತಿ’, ₹10 ಸಾವಿರ ನಗದು ಪ್ರದಾನ ಮಾಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಕೊಡಗಿನ ಸುಮನಾ ಮ್ಯಾಥ್ಯೂ, ವಿಜಯನಗರದ ಅಂಕ್ಲೇಶ್, ಹಾಸನದ ಶೈಲಜಾ ಎಚ್.ಸಿ., ಕಲಬುರಗಿಯ ಶ್ರುತಿ, ದಾವಣಗೆರೆಯ ಅಂಜಿನಪ್ಪ ಅವರು ‘ಡಾ. ಪದ್ಮಿನಿ ಫೆಲೋಶಿಪ್‌ಗೆ’ ಆಯ್ಕೆಯಾಗಿದ್ದಾರೆ. ಈ ಐದು ಮಂದಿಗೆ ಒಂದು ವರ್ಷ ಪ್ರತಿ ತಿಂಗಳು ತಲಾ ₹10 ಸಾವಿರ ಫೆಲೋಶಿಪ್ ನೀಡಲಾಗುತ್ತಿದೆ ಎಂದು ವೇದಿಕೆಯಲ್ಲಿ ಪ್ರಕಟಿಸಲಾಯಿತು.
ಸಿಆರ್‌ಟಿನ ಕಾರ್ಯಕಾರಿ ನಿರ್ದೇಶಕ ಎನ್.ವಿ. ವಾಸುದೇವ ಶರ್ಮಾ, ಟ್ರಸ್ಟಿಗಳಾದ ಅಂಜಲಿ ರಾಮಣ್ಣ, ಆನ್ಸೆಲಂ ರೊಸಾರಿಯೋ, ಕ್ಯಾತ್ಯಾಯಿನಿ ಚಾಮರಾಜ, ರೇವತಿ, ನಾಗಸಿಂಹರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.