ADVERTISEMENT

ಮಕ್ಕಳ ಅಶ್ಲೀಲ ವಿಡಿಯೊ ಹರಿಬಿಟ್ಟ ಯುವತಿ !

​ಪ್ರಜಾವಾಣಿ ವಾರ್ತೆ
Published 1 ಮೇ 2021, 22:04 IST
Last Updated 1 ಮೇ 2021, 22:04 IST

ಬೆಂಗಳೂರು: ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಹಲವು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಆರೋಪದಡಿ ನಗರದ ಯುವತಿಯೊಬ್ಬರ ವಿರುದ್ಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (ಎನ್‌ಸಿಆರ್‌ಬಿ) ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವತಿ ತಲೆಮರೆಸಿಕೊಂಡಿದ್ದಾಳೆ. ಆಕೆಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಫೋಟೊಗಳನ್ನು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಅಪರಾಧ. ಈ ಕೃತ್ಯ ಎಸಗುವ ವ್ಯಕ್ತಿಗಳ ಮಾಹಿತಿಯನ್ನು ಎನ್‌ಸಿಆರ್‌ಬಿ ಸಿಬ್ಬಂದಿ, ಸೈಬರ್‌ ಟಿಪ್‌ಲೈನ್‌ ಮೂಲಕ ಪತ್ತೆ ಮಾಡುತ್ತಾರೆ. ನಂತರ ವ್ಯಕ್ತಿಗಳು ವಾಸವಿರುವ ವಿಳಾಸ ವ್ಯಾಪ್ತಿಯ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡುತ್ತಾರೆ’ ಎಂದೂ ತಿಳಿಸಿವೆ.

ADVERTISEMENT

‘ಕೋರಮಂಗಲದ 4ನೇ ಹಂತದಲ್ಲಿ ವಾಸವಿರುವ ಯುವತಿ, ಇತ್ತೀಚೆಗೆ ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಕೆಲ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಅವರು ಬಳಸಿದ್ದ ಕಂಪ್ಯೂಟರ್ ಐ.ಪಿ ವಿಳಾಸ ಹಾಗೂ ಇತರೆ ‍ಪುರಾವೆ ಆಧರಿಸಿ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.