ADVERTISEMENT

ಹೆಚ್ಚುತ್ತಿದೆ ಮಕ್ಕಳ ಕಳ್ಳಸಾಗಣೆ !

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 6 ತಿಂಗಳಲ್ಲಿ 136 ಮಕ್ಕಳು ಪತ್ತೆ * ದಾಖಲಾಗುವ ದೂರುಗಳ ಸಂಖ್ಯೆ ಅತಿ ಕಡಿಮೆ

ಗುರು ಪಿ.ಎಸ್‌
Published 10 ಜನವರಿ 2021, 20:47 IST
Last Updated 10 ಜನವರಿ 2021, 20:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊರರಾಜ್ಯದ ಮಕ್ಕಳನ್ನು ಕೆಲಸಕ್ಕಾಗಿ ನಗರಕ್ಕೆ ಕರೆತರುವ ಪ್ರಕರಣಗಳು ಲಾಕ್‌ಡೌನ್ ಸಡಿಲಿಕೆ ನಂತರ ಹೆಚ್ಚಾಗಿವೆ. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣವೊಂದರಲ್ಲಿಯೇ ಕಳೆದ ಆರು ತಿಂಗಳಲ್ಲಿ 136 ಮಕ್ಕಳು ಸಿಕ್ಕಿದ್ದಾರೆ.

‘ಕೆಎಸ್‌ಆರ್‌ ನಿಲ್ದಾಣದಲ್ಲಿ ದಿನಕ್ಕೆ ನಾಲ್ಕು–ಐದು ಮಕ್ಕಳು ಸಿಗುತ್ತಿದ್ದರು. ಪರೀಕ್ಷೆ ಒತ್ತಡ, ಜಗಳದ ಕಾರಣದಿಂದ ದಿನಕ್ಕೆ ಒಬ್ಬರೋ, ಇಬ್ಬರೋ ಮನೆಯಿಂದ ತಪ್ಪಿಸಿಕೊಂಡು ಬರುತ್ತಿದ್ದರು. ಈಗ ಮಕ್ಕಳ ಸಾಗಣೆದಾರರು ಒಂದೊಂದು ಗುಂಪಿನಲ್ಲಿ ಏಳೆಂಟು ಮಕ್ಕಳನ್ನು ಕರೆತರುತ್ತಿದ್ದಾರೆ’ ಎಂದು ಚೈಲ್ಡ್‌ ಲೈನ್‌ ಇಂಡಿಯಾ ಫೌಂಡೇಷನ್‌ನ ಯೋಜನಾ ವ್ಯವಸ್ಥಾಪಕಿ ಎಂ.ಟಿ. ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಮಕ್ಕಳ ಸಹಾಯವಾಣಿಯ ಈ ಫೌಂಡೇಷನ್‌, ದೇಶದ ನೋಡಲ್‌ ಏಜೆನ್ಸಿಯಾಗಿದೆ.

‘ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಜಾರ್ಖಂಡ್‌ನಿಂದ ಹೆಚ್ಚು ಮಕ್ಕಳನ್ನು ಕರೆತರಲಾಗುತ್ತಿದೆ. ಕೇಳಿದರೆ ಶಾಲೆಗೆ ಸೇರಿಸಲು ಕರೆ ತಂದಿದ್ದೇವೆ ಎನ್ನುತ್ತಾರೆ. ಆದರೆ, ನಂತರ ಹೋಟೆಲ್‌ಗಳಲ್ಲಿ, ಇಟ್ಟಿಗೆ ಕಾರ್ಖಾನೆಗಳು, ಶೂ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರಿಸುತ್ತಾರೆ. ನಿತ್ಯ ದೂರು ನೀಡಲು ನಮಗೆ ಸಾಧ್ಯವಿಲ್ಲ. ಲಿಖಿತ ದೂರು ನೀಡದ ಹೊರತು ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಳ್ಳುವುದಿಲ್ಲ. ಹೀಗಾಗಿ ನಿಖರ ಅಂಕಿ–ಅಂಶಗಳು ಸಿಗುವುದಿಲ್ಲ’ ಎಂದೂ ಅವರು ಹೇಳಿದರು.

ADVERTISEMENT

‘ಜೂನ್‌ನಿಂದ ಡಿಸೆಂಬರ್‌ ಅವಧಿಯಲ್ಲಿ 136 ಮಕ್ಕಳು ಪತ್ತೆಯಾಗಿದ್ದರು. ಅವರನ್ನು ಮಕ್ಕಳ ಕಲ್ಯಾಣ ಸಮಿತಿಗಳಿಗೆ (ಸಿಡಬ್ಲ್ಯುಸಿ) ಕಳುಹಿಸಲಾಗಿದೆ. ಪೋಷಕರು ಬರುವವರೆಗೆ ಆರೈಕೆ ಕೇಂದ್ರಗಳಲ್ಲಿ ಇವರು ಇರುತ್ತಾರೆ’ ಎಂದರು.

ಪರಿಣಾಮಕಾರಿಯಾಗದ ಆನ್‌ಲೈನ್ ಸಮಾಲೋಚನೆ:‘ಬಾಲ್ಯವಿವಾಹ, ಸಂಬಂಧಿಕರಿಂದಲೇ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಸಿಡಬ್ಲ್ಯುಸಿಗಳು ಹೆಚ್ಚು ಕ್ರಿಯಾಶೀಲವಾಗಿಲ್ಲ’ ಎಂದು ಚೈಲ್ಡ್‌ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ. ರಾವ್ ದೂರಿದರು.

‘ಕೆಲವು ಸಿಡಬ್ಲ್ಯುಸಿಗಳಲ್ಲಿ ಈಗಲೂ ಆನ್‌ಲೈನ್‌ನಲ್ಲಿಯೇ ಸಮಾಲೋಚನೆ ನಡೆಸಲಾಗುತ್ತಿದೆ. ಇದು ಅಷ್ಟು ಪರಿಣಾಮಕಾರಿಯಾಗುತ್ತಿಲ್ಲ. ಮಕ್ಕಳ ಮುಖಭಾವ ಕಾಣದಿದ್ದರೆ ಅವರು ಸುಳ್ಳು ಹೇಳುತ್ತಾರೋ, ನಿಜ ಹೇಳುತ್ತಾರೆಯೇ ತಿಳಿಯುವುದಿಲ್ಲ. ಹೀಗಾದಾಗ ಅಂತಹ ಮಕ್ಕಳಿಗೆ ಸೂಕ್ತ ನ್ಯಾಯ ದೊರಕುವುದಿಲ್ಲ’ ಎಂದರು.

‘ಮಕ್ಕಳ ವಿಚಾರಣೆ ವಿಳಂಬವಾದಷ್ಟೂ ಅವರು ಪೋಷಕರನ್ನು ಸೇರುವುದು ನಿಧಾನವಾಗುತ್ತಿದೆ. ಬಾಲಮಂದಿರಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಬಡ ಪೋಷಕರು ಹೊರರಾಜ್ಯದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬರಬೇಕು. ವಿಚಾರಣೆ ನಿಧಾನವಷ್ಟೂ ಅವರಿಗೆ ಆರ್ಥಿಕ ಹೊರೆ ಹೆಚ್ಚುತ್ತದೆ’ ಎಂದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ 3 ಸಿಡಬ್ಲ್ಯುಸಿಗಳಿವೆ. ಬಾಲಕರಿಗೆ (1), ಬಾಲಕಿಯರಿಗಾಗಿ (2) ಮತ್ತು 6 ವರ್ಷದೊಳಗಿನ ಮಕ್ಕಳಿಗೆ (3) ಒಂದೊಂದು ಸಮಿತಿಗಳಿವೆ. ಸಿಡಬ್ಲ್ಯುಸಿ 1 ಈಗಲೂ ಆನ್‌ಲೈನ್‌ನಲ್ಲಿ ಸಮಾಲೋಚನೆ ನಡೆಸುತ್ತಿದೆ.

‘ಆರೋಗ್ಯ ದೃಷ್ಟಿಯಿಂದ ಕ್ರಮ’

‘ನಗರದಲ್ಲಿನ ಉಳಿದೆರಡು ಸಿಡಬ್ಲ್ಯುಸಿಗಳಲ್ಲಿ ಹೆಚ್ಚು ಮಕ್ಕಳು ಇರುವುದಿಲ್ಲ. ನಾವು ದಿನಕ್ಕೆ 10 ರಿಂದ 15 ಬಾಲಕರ ಜೊತೆಗೆ ಸಮಾಲೋಚನೆ ಮಾಡಬೇಕಾಗುತ್ತದೆ. ಇವರಲ್ಲಿ ಬಹುತೇಕರು ಹೊರರಾಜ್ಯದವರು. ಇಂತಹ ಮಕ್ಕಳಿಗೆ ಕೋವಿಡ್ ಬಂದಿರುವ ಉದಾಹರಣೆಗಳೂ ಇವೆ. ಚರ್ಚೆಯ ವೇಳೆ ಮಕ್ಕಳ ಪೋಷಕರೂ ಬರುವುದರಿಂದ ದಟ್ಟಣೆ ಆಗುತ್ತದೆ. ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಆನ್‌ಲೈನ್‌ನಲ್ಲಿಯೇ ವಿಚಾರಣೆ ಮಾಡುತ್ತಿದ್ದೇವೆ’ ಎಂದು ಸಿಡಬ್ಲ್ಯುಸಿ 1ರ ಮುಖ್ಯಸ್ಥರಾದ ಡಾ. ಶೋಭಾದೇವಿ ಹೇಳಿದರು.

‘ಮಕ್ಕಳಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆಯನ್ನೂ ಮಾಡಿಸುತ್ತಿದ್ದೇವೆ. ಬೇರೆ ಆರೋಗ್ಯ ಸಮಸ್ಯೆ ಹೊಂದಿರುವ ಮಕ್ಕಳಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಿ, ನೇರವಾಗಿ ಸಮಾಲೋಚನೆ ಮಾಡಲಾಗುತ್ತಿದೆ. ಆದರೆ, ಆನ್‌ಲೈನ್‌ ಸಮಾಲೋಚನೆ ಪರಿಣಾಮಕಾರಿ ಅಲ್ಲ ಎನ್ನುವುದು ತಪ್ಪು’ ಎಂದರು.

‘ಮಕ್ಕಳ ಸಾಗಣೆ ಇಲ್ಲವೇ ಇಲ್ಲ!’

‘ಮನೆಯಿಂದ ತಪ್ಪಿಸಿಕೊಂಡು, ಜಗಳ ಮಾಡಿಕೊಂಡು ಮಕ್ಕಳು ಬಂದಿರುವ ಪ್ರಕರಣಗಳಿವೆ. ಲಾಕ್‌ಡೌನ್‌ ನಂತರ ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಬಂದೇ ಇಲ್ಲ’ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಲಾಕ್‌ಡೌನ್‌ಗಿಂತ ಮೊದಲು ಸಾಮಾನ್ಯ ಬೋಗಿಯಲ್ಲಿ ಯಾರೂ ಬೇಕಾದರೂ ಮಕ್ಕಳನ್ನು ಕರೆತರಬಹುದಿತ್ತು. ಈಗ ಟಿಕೆಟ್‌ ಕಾಯ್ದಿರಿಸಲೇಬೇಕು. ಇದರಲ್ಲಿ ಅವರ ಮೊಬೈಲ್‌ ಸಂಖ್ಯೆ ಸೇರಿದಂತೆ ಎಲ್ಲ ವಿವರ ನೀಡಬೇಕಾಗುತ್ತಿದೆ. ಎಲ್ಲ ದಾಖಲೆ ನೀಡಿ ಮಕ್ಕಳನ್ನು ಕದ್ದು ತರುವ ಸಾಹಸಕ್ಕೆ ಯಾರೂ ಕೈ ಹಾಕುವುದಿಲ್ಲ. ಈ ಬಗ್ಗೆ ನಮಗೆ ಒಂದೂ ದೂರು ಬಂದಿಲ್ಲ’ ಎಂದು ಅವರು ತಿಳಿಸಿದರು.

***

ಮಕ್ಕಳ ಕಳ್ಳಸಾಗಣೆ ಬಗ್ಗೆ ಗಮನಕ್ಕೆ ಬಂದಿಲ್ಲ. ಯಾವುದೇ ಮಕ್ಕಳನ್ನು ಶೀಘ್ರವಾಗಿ ಪೋಷಕರಿಗೆ ಒಪ್ಪಿಸಲು ಬೇಕಾದ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

– ಶಶಿಕಲಾ ಜೊಲ್ಲೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ಮಕ್ಕಳ ವಿಚಾರಣೆ ತಡವಾದಷ್ಟೂ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗುತ್ತದೆ. 50 ಮಕ್ಕಳ ವಿಚಾರಣೆ ಬಾಕಿ ಇದೆ. ನೇರ ಸಮಾಲೋಚನೆ ನಡೆಸುವಂತೆ ಸಿಡಬ್ಲ್ಯುಸಿಗೆ ಪತ್ರ ಬರೆಯಲಾಗುವುದು

– ಮಮ್ತಾಜ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.