ADVERTISEMENT

ಠಾಣೆಯಲ್ಲಿ ಬಂದೂಕು ನೋಡಿ ಹಿಗ್ಗಿದ ಚಿಣ್ಣರು!

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 19:54 IST
Last Updated 8 ಅಕ್ಟೋಬರ್ 2018, 19:54 IST
ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಸಬ್ ಇನ್‌ಸ್ಪೆಕ್ಟರ್ ವೆಂಕಟಗೌಡ
ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಸಬ್ ಇನ್‌ಸ್ಪೆಕ್ಟರ್ ವೆಂಕಟಗೌಡ   

ಬೆಂಗಳೂರು: ಸೋಲದೇವನಹಳ್ಳಿ ಠಾಣೆಗೆ ವಿಶೇಷ ಕಳೆ ಬಂದಿತ್ತು. ಕಾರಣ ಇಷ್ಟೇ. ಪ್ರತಿದಿನ ಕಳ್ಳರು, ದರೋಡೆ ಕೋರರು ಹಾಗೂ ಪೊಲೀಸ್‌ ಸಿಬ್ಬಂದಿ ಗಲಾಟೆ ಕೇಳಿಸುತ್ತಿದ್ದ ಠಾಣೆಯಲ್ಲಿ ಮಕ್ಕಳ ಸದ್ದು ಜಿನುಗಿತು.

ಮಕ್ಕಳು ಅಲ್ಲಿಗೆ ದೂರು ದಾಖಲಿಸಲು ಬಂದಿರಲಿಲ್ಲ. ಪೊಲೀಸ್ ಠಾಣೆಯ ಕಾರ್ಯಗಳ ಕುರಿತು ಮಾಹಿತಿ ಕಲೆಹಾಕಲು ಬಂದಿದ್ದರು. ತರಬನಹಳ್ಳಿ ಗ್ರಾಮದ ಡಾಲ್ಫಿನ್‌ ಪಬ್ಲಿಕ್‌ ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳು ಎಫ್‌ಐಆರ್‌ ದಾಖಲಿಸುವ ವಿಧಾನ, ಕಳ್ಳರ ಮಾಹಿತಿಯನ್ನು ಕಲೆ ಹಾಕುವ ತಂತ್ರಗಾರಿಕೆ, ಗಲಾಟೆ ತಡೆಯುವ ವಿಧಾನ ಸೇರಿದಂತೆ ಬಹುಮುಖ್ಯವಾದ ಚಟುವಟಿಕೆಗಳ ಕುರಿತು ಸಬ್‌ ಇನ್‌ಸ್ಪೆಕ್ಟರ್‌ ವೆಂಕಟಗೌಡ ಅವರಿಂದ ಮಾಹಿತಿ ಪಡೆದುಕೊಂಡರು. ಠಾಣೆಯಲ್ಲಿದ್ದ ಬಂದೂಕುಗಳನ್ನು ನೋಡಿ ಹಿರಿಹಿರಿ ಹಿಗ್ಗಿದರು.

ಒಂದು ತಾಸಿಗೂ ಹೆಚ್ಚು ಹೊತ್ತು ಮಾತನಾಡಿದ ಅವರು ‘ಫೇಸ್‌ಬುಕ್‌ಗಳಲ್ಲಿ ಹೆಚ್ಚು ಹೊತ್ತು ಕಳೆಯಬೇಡಿ. ಹೆಣ್ಣುಮಕ್ಕಳು ಫೋಟೊ ಅಪ್‌ಲೋಡ್‌ ಮಾಡುವಾಗ ಎಚ್ಚರ ವಹಿಸಿ. ಗಾಂಜಾ, ಅಫೀಮು ಮಾರಾಟಗಾರರು ಹೆಚ್ಚಿದ್ದಾರೆ, ಅಂಥವರಿಂದ ದೂರ ಇರಿ. ಕೆಎಸ್‌ಎಸ್‌, ಐಎಎಸ್‌ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಿ’ ಎಂದರು.

ADVERTISEMENT

ಇನ್‌ಸ್ಪೆಕ್ಟರ್‌ ಸೋಮಶೇಖರ್‌ ‘ಪೊಲೀಸ್ ಎಂದರೆ ಭರವಸೆ. ನಮ್ಮ ಬಗ್ಗೆ ನಿಮಗೆ ಭಯ ಬೇಡ’ ಎಂದರು. ‘ನಿಮ್ಮ ಗುರಿಯೇನು’ ಎಂದು ಇನ್‌ಸ್ಪೆಕ್ಟರ್‌ ಕೇಳಿದ ಪ್ರಶ್ನೆಗೆ ಹೆಚ್ಚಿನ ಮಕ್ಕಳು ‘ಡಾಕ್ಟರ್‌, ಎಂಜಿನಿಯರ್ ಆಗುವ ಆಸೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.