ADVERTISEMENT

ತಿಂಗಳಾಂತ್ಯದಲ್ಲಿ ‘ಮಕ್ಕಳ ವಿಜ್ಞಾನ ಹಬ್ಬ’

ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 12:21 IST
Last Updated 14 ನವೆಂಬರ್ 2019, 12:21 IST
ಮಕ್ಕಳ ವಿಜ್ಞಾನ ಹಬ್ಬ ಆಚರಿಸುವ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಆಯೋಜಕರು ಪಾಲ್ಗೊಂಡಿದ್ದರು
ಮಕ್ಕಳ ವಿಜ್ಞಾನ ಹಬ್ಬ ಆಚರಿಸುವ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಆಯೋಜಕರು ಪಾಲ್ಗೊಂಡಿದ್ದರು   

ಮಡಿಕೇರಿ: ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಆಶ್ರಯದಲ್ಲಿ ಜಿಲ್ಲೆಯ ಆಯ್ದ ಕ್ಲಸ್ಟರ್‌ಗಳಲ್ಲಿ ಈ ತಿಂಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬ ಆಚರಿಸುವ ಕುರಿತು ಬುಧವಾರ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಪದಾಧಿಕಾರಿ ಎಸ್.ವಜ್ರಮುನಿ ಮಾತನಾಡಿ, ‘ರಾಜ್ಯದ 623 ಕ್ಲಸ್ಟರ್‌ಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬವನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಆವಿಷ್ಕಾರ ಯೋಜನೆಯ ಅಡಿಯಲ್ಲಿ ಮಕ್ಕಳಲ್ಲಿ ಸ್ವ–ಕಲಿಕೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವನೆ ಬೆಳೆಸುವ ಉದ್ದೇಶ ಹೊಂದಿದೆ’ ಎಂದರು.

ಮಕ್ಕಳಿಗೆ ತಮ್ಮ ಮನೆ, ಶಾಲೆ ಹಾಗೂ ಸುತ್ತಲಿನ ಪರಿಸರದಲ್ಲಿ ಆಡಿ ಕಲಿ-ನೋಡಿ ಕಲಿ, ಮಾಡಿ ಕಲಿ, ಹಾಡು... ಹೀಗೆ ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸುವುದರೊಂದಿಗೆ ಅವರಲ್ಲಿ ತಾರ್ಕಿಕತೆ, ಸಂಶೋಧನಾ ಪ್ರವೃತ್ತಿ ಬೆಳೆಸುವುದಕ್ಕಾಗಿ ಈ ಬಗ್ಗೆ ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಕಲಿಕೆಯನ್ನು ಉತ್ತಮಪಡಿಸ ಬಹುದಾಗಿದೆ ಎಂದು ತಿಳಿಸಿದರು.

ADVERTISEMENT

ಚಟುವಟಿಕೆ ಆಧಾರಿತ ಕಲಿಕೆಯಿಂದ ಮಕ್ಕಳಲ್ಲಿ ಕೌಶಲಾಭಿವೃದ್ಧಿ ಬೆಳೆಸಲು ಸಾಧ್ಯ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು ಎಂದು ಕೋರಿದರು.

ಕ್ಲಸ್ಟರ್‌ಮಟ್ಟದಲ್ಲಿ ನಡೆಯುವ ಮಕ್ಕಳ ಹಬ್ಬದಲ್ಲಿ 150 ಮಕ್ಕಳು, ಜಿಲ್ಲಾಮಟ್ಟದ ಹಬ್ಬದಲ್ಲಿ 300 ಮಕ್ಕಳು ಭಾಗವಹಿಸಲಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ವಜ್ರಮುನಿ ಕೋರಿದರು.

ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಕಾಶಿನಾಥ್ ಮಾತನಾಡಿ, ನವೆಂಬರ್ ತಿಂಗಳಿನಲ್ಲಿ 6, 7, 8ನೇ ತರಗತಿಯ ಮಕ್ಕಳಿಗೆ ಜಿಲ್ಲೆಯ 10 ಕ್ಲಸ್ಟರ್‌ಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ನ.19 ಮತ್ತು 20ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಸಿಆರ್‌ಪಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.

ಬಿಜಿವಿಸ್‌ನ ಸಂಪನ್ಮೂಲ ವ್ಯಕ್ತಿ ಪಿ.ಕೆ.ಲತೀಫ್, ಕಾರ್ಯಕ್ರಮದ ಸಂಯೋಜಕ ವಿಜ್ಞಾನ ವಿಷಯ ಪರಿವೀಕ್ಷಕಿ ಎಂ.ಜೆ.ಗಂಗಮ್ಮ, ಸಂಪನ್ಮೂಲ ವ್ಯಕ್ತಿ ಟಿ.ಜಿ.ಪ್ರೇಮಕುಮಾರ್, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಶಿಕ್ಷಕ ಡಿ.ಚಂದನಾ, ಬಿ.ಕೆ.ಲಲಿತಾ, ಆರ್.ದಿವಾಕರ್, ಸಮತ ತರಬೇತಿ ಸಂಘಟನೆ ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.