ADVERTISEMENT

ಚಿಲುಮೆ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 20:22 IST
Last Updated 8 ಡಿಸೆಂಬರ್ 2022, 20:22 IST
   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ ದುರುಪಯೋಗ ಮಾಡಿಕೊಳ್ಳ
ಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಚಿಲುಮೆ ಸಂಸ್ಥೆಯ ಸಿಬ್ಬಂದಿ ಜ್ಯೋತಿಲಕ್ಷ್ಮೀ ಹಾಗೂ ಕೆಂಪೇಗೌಡ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಗರದ 66ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.

ಈ ಸಂಬಂಧ ಕೆ. ಶ್ರೀನಿವಾಸ್, ಸಿಬ್ಬಂದಿಗಳಾದ ಜ್ಯೋತಿ ಲಕ್ಷ್ಮೀ, ಕಂಪೇಗೌಡ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಾಧೀಶ ಸಿ.ಆರ್. ಹೇಮಂತ್ ಕುಮಾರ್ ವಜಾಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಹಲಸೂರು ಗೇಟ್ ಠಾಣಾಧಿಕಾರಿ ಕಳೆದ ವಾರ ಕೆ.ಶ್ರಿನಿವಾಸ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗದ ಶ್ರಿನಿವಾಸ್ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಡಿಸೆಂಬರ್‌ 2ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

--

ಕನ್ನಡಿಗರ ಮೇಲೆ ದಾಳಿ: ಪ್ರತಿಭಟನೆ

ಬೆಂಗಳೂರು: ಬೆಳಗಾವಿ ಗಡಿ ವಿವಾದವನ್ನು ಕೆಣಕಿ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಸಂಸ್ಥೆಗಳ ಆಸ್ತಿ–ಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ಟಿ.ಎ. ನಾರಾಯಣಗೌಡ ಬಣ) ಎಸ್‌ಬಿಎಂ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

‘ಬೆಳಗಾವಿ ಗಡಿ ವಿವಾದ ಸು‌ಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಮಹಾರಾಷ್ಟ್ರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆಲದ ಕಾನೂನಿಗೆ ಗೌರವ ನೀಡಿ ತೀರ್ಪಿಗೆ ಕಾಯುವ ಬದಲು ಗಡಿ ಭಾಗದಲ್ಲಿ ಸಂಘರ್ಷ ಮೂಡಿಸಲು ಪ್ರಯತ್ನಿಸುತ್ತಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿಷೇಧಿಸಿ ಅಲ್ಲಿ ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಕರವೇ ಆಗ್ರಹಿಸಿದೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ
ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ
ಗಡಿ ವಿವಾದವನ್ನು ಬಗೆಹರಿಸಬೇಕು’ ಎಂದು ಕರವೇ ಮನವಿ ಪತ್ರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.