ಸಾಂದರ್ಭಿಕ ಚಿತ್ರ
ಬೆಂಗಳೂರು: ಟಿಬೆಟ್ ಮೇಲೆ ಚೀನಾ ನಡೆಸಿದ ದೌರ್ಜನ್ಯವನ್ನು ಬಹಿರಂಗಪಡಿಸಲು ಟಿಬೆಟಿಯನ್ ಯುವ ಕಾಂಗ್ರೆಸ್ ಅಖಿಲ ಭಾರತ ಮೋಟಾರ್ ಬೈಕ್ ರ‍್ಯಾಲಿ ಹಮ್ಮಿಕೊಂಡಿದೆ ಎಂದು ರ‍್ಯಾಲಿ ಸಂಯೋಜಕ ವಿಷ್ಣುಜಿ ತಿಳಿಸಿದರು.
‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು 1959ರಲ್ಲಿ ಟಿಬೆಟ್ ಅನ್ನು ವಶಪಡಿಸಿಕೊಂಡ ಮೇಲೆ, ಶಾಂತಿಯುತವಾಗಿದ್ದ ಇಂಡೋ-ಟಿಬೆಟ್ ಗಡಿ ಛಿದ್ರವಾಯಿತು. ತನ್ನ ವಿಸ್ತರಣಾ ನೀತಿಯಿಂದಾಗಿ ಚೀನಾವು ಭಾರತದ ಭೂಪ್ರದೇಶದೊಳಗೆ ನುಸುಳುವಿಕೆಗೆ ಪ್ರಚೋದಿಸುತ್ತಿದೆ. ಭಾರತದ ಗಡಿ ಭದ್ರತೆ ಮತ್ತು ಸಾರ್ವಭೌಮತೆಗೆ ನೇರ ಬೆದರಿಕೆಯನ್ನು ಉಂಟುಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಟಿಬೆಟ್ ಸಂಸ್ಕೃತಿಯನ್ನು ಚೀನಾ ನಾಶ ಮಾಡುತ್ತಿದೆ. ಟಿಬೆಟಿಯನ್ ಶಾಲೆಗಳು ಮತ್ತು ಸನ್ಯಾಸಿಗಳ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚುತ್ತಿದೆ. ಬೃಹತ್ ಅಣೆಕಟ್ಟು ನಿರ್ಮಿಸುವುದು. ಪರಮಾಣು ಉತ್ಪಾದನೆ, ಪರಮಾಣು ತ್ಯಾಜ್ಯವನ್ನು ಸುರಿಯುವುದು ಸಹಿತ ವಿನಾಶಕಾರಿ ನೀತಿಗಳ ಮೂಲಕ ಟಿಬೆಟ್ ಪರಿಸರನ್ನು ಕೂಡ ಹಾಳು ಮಾಡುತ್ತಿದೆ’ ಎಂದು ಆರೋಪಿಸಿದರು.
‘ಟಿಬೆಟ್ ಸ್ವತಂತ್ರ ದೇಶವಾದರೆ ಭಾರತದ ಭದ್ರತೆಗೆ ಪೂರಕವಾಗಲಿದೆ. ಟಿಬೆಟ್‌ನ ಐತಿಹಾಸಿಕ ಸ್ವತಂತ್ರ ಸ್ಥಾನಮಾನವನ್ನು ಬೆಂಬಲಿಸುವ ಮತ್ತು ಐತಿಹಾಸಿಕ ಇಂಡೋ-ಟಿಬೆಟ್ ಗಡಿಯನ್ನು ಗುರುತಿಸುವ ನಿರ್ಣಯವನ್ನು ಭಾರತ ಸರ್ಕಾರ ಕೈಗೊಳ್ಳಬೇಕು. ಟಿಬೆಟ್ ಪರಿಸರವನ್ನು ಉಳಿಸಲು ವಿಶ್ವದ ಸಮುದಾಯಗಳು ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.
‘ಈ ಬಗ್ಗೆ ಭಾರತೀಯರಲ್ಲಿ ಜಾಗೃತಿ ಮೂಡಿಸಲು ನವೆಂಬರ್ 22ರಂದು ಅರುಣಾಚಲ ಪ್ರದೇಶದ ಇಂಡೋ-ಟಿಬೆಟ್ ಗಡಿಯಲ್ಲಿರುವ ಬುಮ್-ಲಾ ಪಾಸ್‌ನಿಂದ ಬೈಕ್ ರ‍್ಯಾಲಿ ಆರಂಭಿಸಿದ್ದೇವೆ. ಭಾರತದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ 15,000 ಕಿಲೋಮೀಟರ್ ರ‍್ಯಾಲಿ ನಡೆಸಲಾಗುತ್ತಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗೊನ್ಪೊ ದುಂಡುಪ್, ತ್ಸೆರಿಂಗ್ ಚೊಂಪೆಲ್, ಟೆನ್‌ಜಿನ್ ಲಾಡೆನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.