ADVERTISEMENT

ಚೀನಾ ಸಾಲ ಆ್ಯಪ್‌ ವಂಚನೆ: ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:08 IST
Last Updated 17 ಮಾರ್ಚ್ 2023, 22:08 IST

ಬೆಂಗಳೂರು: ಚೀನಾದ ಪ್ರಜೆಗಳು ಅಕ್ರಮವಾಗಿ ಭಾರತದಲ್ಲಿನ ಫಿನ್‌ಟೆಕ್‌ ಕಂಪನಿಗಳು, ಇತರ ಹಣಕಾಸು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಆ್ಯಪ್‌ ಮೂಲಕ ಸಾಲ ನೀಡಿ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಆರೋಪಪಟ್ಟಿಯನ್ನು ಅಂಗೀಕರಿಸಿರುವ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯ, ವಿಚಾರಣೆ ಆರಂಭಿಸಿದೆ.

ಚೀನಾ ಪ್ರಜೆಗಳ ನೇರ ನಿಯಂತ್ರಣದಲ್ಲಿದ್ದ ಫಿನ್‌ಟೆಕ್‌ ಕಂಪನಿಗಳಾದ ಮ್ಯಾಡ್‌ ಎಲಿಫೆಂಟ್‌ ನೆಟ್‌ವರ್ಕ್‌ ಟೆಕ್ನಾಲಜಿ ಲಿಮಿಟೆಡ್‌, ಬ್ಯಾರಿಯೋನಿಕ್ಸ್‌ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌, ಕ್ಲೌಡ್‌ ಅಟ್ಲಾಸ್‌ ಫ್ಯೂಚರ್ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ನೋಂದಣಿಯಾಗಿರುವ ಬ್ಯಾಂಕೇತರ ಹಣಕಾಸು ಕಂಪನಿಗಳಾದ ಎಕ್ಸ್‌10 ಫೈನಾನ್ಷಿಯಲ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌, ಟ್ರ್ಯಾಕ್‌ ಫಿನ್‌–ಎಡ್‌ ಪ್ರೈವೇಟ್‌ ಲಿಮಿಟೆಡ್‌, ಜಮ್ನಾದಾಸ್‌ ಮೊರಾರ್ಜಿ ಫೈನಾನ್ಸ್‌ ಪ್ರೈವೇಟ್ ಲಿಮಿಟೆಡ್‌ ಹಾಗೂ ಪಾವತಿ ವಹಿವಾಟು ನಿರ್ವಹಿಸುವ ರೇಝರ್‌ಪೇ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಐವರು ವ್ಯಕ್ತಿಗಳ ವಿರುದ್ಧ ನ್ಯಾಯಾಲಯ ವಿಚಾರಣೆ ಆರಂಭಿಸಿದೆ.

‘ಚೀನಾ ಪ್ರಜೆಗಳು ಆ್ಯಪ್‌ ಮೂಲಕ ಸಾಲ ನೀಡಿ ವಂಚಿಸುತ್ತಿದ್ದ ಆರೋಪದ ಕುರಿತು ಸಿಐಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿದ್ದರು. ಸಿಐಡಿ ಸಲ್ಲಿಸಿದ್ದ ವರದಿ ಆಧರಿಸಿ ಪಿಎಂಎಲ್‌ಎ ಅಡಿಯಲ್ಲಿ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿ, ತನಿಖೆ ನಡೆಸಿತ್ತು. ಫಿನ್‌ಟೆಕ್‌ ಕಂಪನಿಗಳು ಅಕ್ರಮವಾಗಿ ಭಾರತದಲ್ಲಿ ವಹಿವಾಟು ನಡೆಸುತ್ತಿದ್ದವು. ಬ್ಯಾಂಕೇತರ ಹಣಕಾಸು ಕಂಪನಿಗಳು ಕಮಿಷನ್ ಆಸೆಗೆ ತಮ್ಮ ಹೆಸರನ್ನು ಬಳಸಿಕೊಂಡು ವಹಿವಾಟು ನಡೆಸಲು ಅವಕಾಶ ನೀಡಿದ್ದವು’ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ADVERTISEMENT

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ, ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ಈ ಕಂಪನಿಗಳಿಗೆ ಸೇರಿದ ₹77.25 ಕೋಟಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯವು ಈ ಹಿಂದೆ ನೀಡಿದ್ದ ಆದೇಶವನ್ನು ಖಚಿತಪಡಿಸಿದೆ ಎಂದು ತನಿಖಾ ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.