ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ₹ 50 ಸಾವಿರ ದಂಡ

ನಿಷೇಧಿತ ಪ್ಲಾಸ್ಟಿಕ್‌, ಫ್ಲೆಕ್ಸ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:54 IST
Last Updated 21 ಜನವರಿ 2020, 10:54 IST
ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ   

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಕ್ರಿಕೆಟ್‌ ಪಂದ್ಯದ ವೇಳೆ ನಿಷೇಧಿತ ಪ್ಲಾಸ್ಟಿಕ್‌ ಕಪ್‌ ಹಾಗೂ ಫ್ಲೆಕ್ಸ್‌ ಬ್ಯಾನರ್‌ ಬಳಸಿದ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಬಿಎಂಪಿ ₹ 50 ಸಾವಿರ ದಂಡ ವಿಧಿಸಿದೆ.

ಬಿಬಿಎಂಪಿಯ ಪೂರ್ವ ವಲಯದ ಉಪ ಆರೋಗ್ಯಾಧಿಕಾರಿ ಅವರು ದಂಡದ ನೋಟಿಸ್‌ ಅನ್ನು ಕ್ರೀಡಾಂಗಣದ ವ್ಯವಸ್ಥಾಪಕರಿಗೆ ಸೋಮವಾರ ತಲುಪಿಸಿದ್ದಾರೆ. ಈ ನೋಟಿಸ್‌ನ ಛಾಯಾಚಿತ್ರವನ್ನು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಭಾನುವಾರ ನಡೆದ ಕ್ರಿಕೆಟ್‌ ಪಂದ್ಯದ ವೇಳೆ ಉಪ ಆರೋಗ್ಯಾಧಿಕಾರಿ ತಪಾಸಣೆ ಮಾಡಿದಾಗ ಕ್ರೀಡಾಂಗಣದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಕಪ್‌ ಹಾಗೂ ಫ್ಲೆಕ್ಸ್‌ ಬ್ಯಾನರ್‌ ಬಳಸಿದ್ದು ಕಂಡುಬಂದಿತ್ತು.

ADVERTISEMENT

ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಕಪ್‌ ಹಾಗೂ ಫ್ಲೆಕ್ಸ್‌ ಬ್ಯಾನರ್‌ಗಳನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಆರೋಗ್ಯ ವಿಭಾಗದಿಂದ ಹಲವಾರು ಬಾರಿ ತಿಳಿವಳಿಕೆ ನಿಡಲಾಗಿದೆ. ಆದರೂ ಕ್ರೀಡಾಂಗಣದ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಸಲಾಗಿತ್ತು. ಹಾಗಾಗಿ ₹ 50 ಸಾವಿರ ದಂಡ ವಿಧಿಸಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಉಪ ಆರೋಗ್ಯಾಧಿಕಾರಿ ನೋಟಿಸ್‌ ನೀಡಿದ್ದಾರೆ. ದಂಡ ಕಟ್ಟುವುದಕ್ಕೆ ಏಳು ದಿನಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ದಂಡ ಕಟ್ಟದಿದ್ದರೆ ದುಪ್ಪಟ್ಟು ದಂಡ ವಿಧಿಸುತ್ತೇವೆ. ಆಗಲೂ ಪಾವತಿಸದಿದ್ದರೆ ಆಸ್ತಿ ತೆರಿಗೆ ಜೊತೆ ದಂಡವನ್ನೂ ಸೇರಿಸಿ ವಸೂಲಿ ಮಾಡುತ್ತೇವೆ’ ಎಂದು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ಅವರು ‘ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.