ಬೆಂಗಳೂರು: ಕ್ರೈಸ್ಟ್ ವಿಶ್ವವಿದ್ಯಾಲಯದ (ಡೀಮ್ಡ್ ಟು ಬಿ) ಯಶವಂತಪುರ ಕ್ಯಾಂಪಸ್‌ನಲ್ಲಿ ಬಿಹೆವಿಯರಲ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲಾಗುವುದು ಎಂದು ಕ್ರೈಸ್ಟ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ನಿಕಾಯದ ಡೀನ್ ಕೆ.ಜಯಶಂಕರ ರೆಡ್ಡಿ ಘೋಷಿಸಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ಅಂತರರಾಷ್ಟ್ರೀಯ ಮಟ್ಟದ ಬಿಹೆವಿಯರಲ್ ಅರ್ಥಶಾಸ್ತ್ರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಂಡು, ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಅರ್ಥಪೂರ್ಣ ಮತ್ತು ಸಮಾಜಮುಖಿ ದಾರಿಯನ್ನು ಆರಿಸಿಕೊಳ್ಳಬೇಕು’ ಎಂದು ಬಿಐಎಎಸ್ ಸಂಸ್ಥಾಪಕ ಶುಭಭ್ರತ ರಾಯ್ ಸಲಹೆ ನೀಡಿದರು.
ಈ ಸಮ್ಮೇಳನದಲ್ಲಿ ವಿಶ್ವದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು ಹಾಗೂ ತಜ್ಞರು ಬಿಹೆವಿಯರಲ್ ಅರ್ಥಶಾಸ್ತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಐದು ದೇಶಗಳಿಂದ 150ಕ್ಕೂ ಹೆಚ್ಚು ಸಂಶೋಧಕರು ಭಾಗಿಯಾಗಿದ್ದು, 70ಕ್ಕೂ ಹೆಚ್ಚುಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ.
ವಿಶ್ವಬ್ಯಾಂಕ್, ಹಾರ್ವರ್ಡ್ ವಿಶ್ವವಿದ್ಯಾಲಯ, ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ, ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಬಿಐಎಎಸ್ ಮುಂತಾದ ಸಂಸ್ಥೆಗಳ ಉಪನ್ಯಾಸಕರು ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.