ADVERTISEMENT

ಸಿಐಡಿ ಎಸ್‌ಐ ನೇರ ನೇಮಕಾತಿ: ಪರಿಷ್ಕೃತ ನಿಯಮ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 16:52 IST
Last Updated 7 ಸೆಪ್ಟೆಂಬರ್ 2020, 16:52 IST

ಬೆಂಗಳೂರು: ಸಿಐಡಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇರ ನೇಮಕಾತಿಗೆ ಅವಕಾಶ ಕಲ್ಪಿಸುವ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೊಳಿಸಿ ಗೃಹ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಈವರೆಗೂ ಸಿಐಡಿ ಸಬ್‌ ಇನ್‌ಸ್ಪೆಕ್ಟರ್‌ಗಳ ಹುದ್ದೆಗೆ ಸಿವಿಲ್‌ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ನಿಯೋಜನೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಸಿಐಡಿಯಲ್ಲಿ 70 ಡಿಟೆಕ್ಟಿವ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ದೊರೆಯಲಿದೆ.

70 ಡಿಟೆಕ್ಟಿವ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ಹುದ್ದೆಗಳಲ್ಲಿ ಶೇ 75ರಷ್ಟನ್ನು ಪುರುಷರಿಗೂ, ಶೇ 25ರಷ್ಟನ್ನು ಮಹಿಳೆಯರಿಗೂ ಮೀಸಲಿಡಲಾಗಿದೆ. ಪೊಲೀಸ್‌ ಇಲಾಖೆಯ ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದ ಸಮಿತಿ ಈ ನೇರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿದೆ.

ADVERTISEMENT

ಅಭ್ಯರ್ಥಿಗಳು ಆರಂಭಿಕ ಹಂತದಲ್ಲಿ ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಸದೃಢತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆ ಬಳಿಕ 200 ಅಂಕಗಳಿಗೆ ಎರಡು ಪತ್ರಿಕೆಗಳನ್ನು ಒಳಗೊಂಡ ಲಿಖಿತ ಪರೀಕ್ಷೆ ಎದುರಿಸಬೇಕು. ಲಿಖಿತ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್‌ ಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಬೇಕು. ಆ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ.

ಸಿಐಡಿಯಲ್ಲಿ 60 ಇನ್‌ಸ್ಪೆಕ್ಟರ್‌ಗಳ ಹುದ್ದೆಗಳನ್ನು ಸೃಜಿಸಲಾಗಿದೆ. ಈ ಪೈಕಿ 40 ಹುದ್ದೆಗಳನ್ನು (ಶೇ 67) ಡಿಟೆಕ್ಟಿವ್‌ ಸಬ್‌ ಇನ್‌ಸ್ಪೆಕ್ಟರ್‌ಗಳಿಗೆ ಬಡ್ತಿ ನೀಡುವ ಮೂಲಕ ತುಂಬಲಾಗುತ್ತದೆ. 20 ಹುದ್ದೆಗಳಿಗೆ (ಶೇ 33) ಸಿವಿಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ.

61 ಡಿವೈಎಸ್‌ಪಿ ಹುದ್ದೆಗಳು ಸಿಐಡಿಯಲ್ಲಿವೆ. ಈ ಪೈಕಿ 41 ಹುದ್ದೆಗಳನ್ನು ಸಿವಿಲ್‌ ಪೊಲೀಸ್‌ ಡಿವೈಎಸ್‌ಪಿಗಳ ನಿಯೋಜನೆಯಿಂದ ಭರ್ತಿ ಮಾಡಲಾಗುತ್ತದೆ. 20 ಹುದ್ದೆಗಳನ್ನು ಡಿಟೆಕ್ಟಿವ್‌ ಇನ್‌ಸ್ಪೆಕ್ಟರ್‌ಗಳಿಗೆ ಬಡ್ತಿ ನೀಡುವ ಮೂಲಕ ತುಂಬಲಾಗುತ್ತದೆ. ಒಂಭತ್ತು ಎಸ್‌ಪಿ ಹುದ್ದೆಗಳಿವೆ. ಮೂವರು ಐಪಿಎಸ್‌ ಅಧಿಕಾರಿಗಳು, ಮೂವರು ರಾಜ್ಯ ಪೊಲೀಸ್‌ ಸೇವೆಯ ಎಸ್‌ಪಿಗಳು ಮತ್ತು ಡಿಟೆಕ್ಟಿವ್‌ ಡಿವೈಎಸ್‌ಪಿ ಹುದ್ದೆಯಿಂದ ಬಡ್ತಿ ಪಡೆದ ಮೂವರನ್ನು ಈ ಹುದ್ದೆಗಳಿಗೆ ನೇಮಿಸಲಾಗುತ್ತದೆ.

ಉಳಿದಂತೆ ಸಿಐಡಿ ಪೊಲೀಸ್‌ ಮಹಾನಿರ್ದೇಶಕರು, ತಲಾ ಎರಡು ಐಜಿಪಿ ಮತ್ತು ಡಿಐಜಿ ಹುದ್ದೆಗಳನ್ನು ಐಪಿಎಸ್‌ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸಿವಿಲ್‌ ಹಾಗೂ ಮೀಸಲು ಪೊಲೀಸ್‌ ಪಡೆಗಳಿಂದ ನಿಯೋಜನೆ ಮೇರೆಗೆ ಭರ್ತಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.