ADVERTISEMENT

ಸಿಗರೇಟ್‌ ಬಾಕ್ಸ್ ಕದ್ದಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 20:58 IST
Last Updated 18 ಫೆಬ್ರುವರಿ 2021, 20:58 IST
ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಉಪಕರಣ, ಮಾರಕಾಸ್ತ್ರ ಹಾಗೂ ಮೊಬೈಲ್‌ಗಳು
ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಉಪಕರಣ, ಮಾರಕಾಸ್ತ್ರ ಹಾಗೂ ಮೊಬೈಲ್‌ಗಳು   

ಬೆಂಗಳೂರು: ಸಿಗರೇಟ್‌ ಬಾಕ್ಸ್, ಕಾರು ಕಳ್ಳತನ ಹಾಗೂ ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನದ ಜಿತೇಂದ್ರಕುಮಾರ್ (24), ಪ್ರಕಾಶ್ (38), ಅಮರರಾಮ್ (42) ಹಾಗೂ ರಮೇಶ್ ಕುಮಾರ್ (24) ಬಂಧಿತರು. ಅವರಿಂದ ₹ 28.70 ಲಕ್ಷ ಮೌಲ್ಯದ 20 ಸಿಗರೇಟ್ ಬಾಕ್ಸ್‌ಗಳು, 2 ಕಾರು ಹಾಗೂ ₹ 25 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ಹೇಳಿದರು.

‘ಫೆ. 15ರಂದು ಆರೋಪಿಗಳು, ಓ.ಟಿ. ಪೇಟೆ ಜಂಕ್ಷನ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅವರು ಬಳಸುತ್ತಿದ್ದ ಕಾರಿಗೆ ನೋಂದಣಿ ಫಲಕ ಇರಲಿಲ್ಲ. ಅನುಮಾನಗೊಂಡ ಪಿಎಸ್‌ಐ ಜಿ. ಶ್ರುತಿ ಹಾಗೂ ಸಿಬ್ಬಂದಿ, ಆರೋಪಿಗಳನ್ನು ಪರಿಶೀಲನೆ ನಡೆಸಿದ್ದರು. ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗುತ್ತಿದ್ದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಎರಡು ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು. ದಾವಣಗೆರೆಯಲ್ಲಿ 12 ಸಿಗರೇಟ್ ಬಾಕ್ಸ್ ಹಾಗೂ 8 ಸಿಗರೇಟ್ ಬಾಕ್ಸ್‌ಗಳನ್ನು ಕದ್ದಿದ್ದರು. ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ಕಾರು ಕಳವು ಮಾಡಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಮನೆಯಲ್ಲಿ ಕಳವು ಮಾಡಲು ಹಾಗೂ ಬೀಗ ಮುರಿಯಲು ಆರೋಪಿಗಳು ಕೆಲ ಉಪಕರಣ ಬಳಸುತ್ತಿದ್ದರು.’

‘ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದ ಆರೋಪಿಗಳು, ಗ್ಯಾಂಗ್ ಕಟ್ಟಿಕೊಂಡಿದ್ದರು. ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಿ ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಬೆಂಗಳೂರಿನಲ್ಲೂ ಮತ್ತಷ್ಟು ಮನೆಗಳಲ್ಲಿ ಕೃತ್ಯ ಎಸಗಲು ಸಂಚು ರೂಪಿಸಿದ್ದರು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.