ADVERTISEMENT

ಮಕ್ಕಳ ಸುರಕ್ಷತೆ ಕುರಿತು ಗಮನ ಹರಿಸಿ; ಡಾ. ವಿಜಯಲಕ್ಷ್ಮಿ ದೇಶಮಾನೆ

ಸಿಐಐ–ವೈಐ ಮಾಸೂಮ್ ರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:08 IST
Last Updated 30 ಮೇ 2025, 16:08 IST
   

ಬೆಂಗಳೂರು: ‘ಮಕ್ಕಳು ಸಮಾಜದ ಅತ್ಯಂತ ದುರ್ಬಲ ವರ್ಗಕ್ಕೆ ಸೇರುತ್ತಾರೆ. ಅವರ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕು’ ಎಂದು ಡಾ. ವಿಜಯಲಕ್ಷ್ಮಿ ದೇಶಮಾನೆ ಸಲಹೆ ನೀಡಿದರು.

ಸಿಐಐ ಯಂಗ್ ಇಂಡಿಯನ್ಸ್(ಸಿಐಐ–ವೈಐ) ಸಂಸ್ಥೆಯ ‘ಮಾಸೂಮ್‌’ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮತ್ತು ಮಕ್ಕಳ ಸುರಕ್ಷತೆ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಸುರಕ್ಷತೆ ನೀಡುವುದು ಸೌಲಭ್ಯವಾಗಿರದೇ, ಅದೊಂದು ಹಕ್ಕಾಗಬೇಕು. ಮನೆ, ಶಾಲೆ ಮತ್ತು ಸಮುದಾಯಗಳಲ್ಲಿ ಮಕ್ಕಳಿಗೆ ಸುರಕ್ಷಿತ ಪರಿಸರವನ್ನು ರೂಪಿಸಲು ಇಂಥ ಸಂವಾದಗಳು ನಿರ್ಣಾಯಕವಾಗುತ್ತವೆ ಎಂದು ತಿಳಿಸಿದರು.

ADVERTISEMENT

ಸಿಐಐ ಯಂಗ್‌ ಇಂಡಿಯಾ ಸಂಸ್ಥೆಯ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷೆ ಪೂಜಿತಾ ಪ್ರಸಾದ್, ‘ಮಾಸೂಮ್’ ಎಂಬುದು ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗಾಗಿ ರೂಪಿಸಿರುವ ಯೋಜನೆಯಾಗಿದೆ. ಕಳೆದ ದಶಕದಲ್ಲಿ ಈ ಕುರಿತು ಜಾಗೃತಿ ಅಭಿಯಾನ, ಶಿಕ್ಷಕರಿಗೆ ತರಬೇತಿ ಮತ್ತು ಇಂಥ ಪ್ರಕರಣಗಳ ಪರ ವಕಾಲತ್ತು ವಹಿಸುವ ಮೂಲಕ ನೂರಾರು ಕುಟುಂಬಗಳಿಗೆ ನೆರವಾಗಿದ್ದೇವೆ. ಕರ್ನಾಟಕದಲ್ಲಿ ಮಕ್ಕಳಿಗೆ ಸುರಕ್ಷಿತ ಪರಿಸರ ನಿರ್ಮಿಸುವ ಭರವಸೆ ನೀಡುವುದೇ ಈ ಸಮ್ಮೇಳನದ ಉದ್ದೇಶ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಗೋಷ್ಠಿಗಳಲ್ಲಿ ಮಕ್ಕಳನ್ನು ರಕ್ಷಿಸುವುದು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ತಡೆಯುವ ಕುರಿತು ಚರ್ಚೆ ನಡೆಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರು ಕಾನೂನಿನ ನಿರ್ಬಂಧಗಳ ಬಗ್ಗೆಯೂ ವಿಚಾರಗಳನ್ನು ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.