ADVERTISEMENT

ಗುಡುಗು–ಸಿಡಿಲು ಮಳೆ; ಉರುಳಿದ ಮರಗಳು

* ಬಿಸಿಲಿನ ಬೇಗೆಗೆ ತಂಪೆರೆದ ಮಳೆ * ಜೋರು ಗಾಳಿ ಜೊತೆ ಆಲಿಕಲ್ಲು * , ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 1 ಮೇ 2022, 18:33 IST
Last Updated 1 ಮೇ 2022, 18:33 IST
ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಮೆಜೆಸ್ಟಿಕ್‌ ರೈಲ್ವೆ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು –  ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಮೆಜೆಸ್ಟಿಕ್‌ ರೈಲ್ವೆ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು –  ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.   

ಬೆಂಗಳೂರು: ನಗರದಲ್ಲಿ ಭಾನುವಾರ ಸಂಜೆಯಿಂದ ರಾತ್ರಿಯವರೆಗೂ ಜೋರು ಮಳೆ ಆಗಿದ್ದು, 20ಕ್ಕೂ ಹೆಚ್ಚು ಕಡೆ ಮರ ಹಾಗೂ ಕೊಂಬೆಗಳು ಉರುಳಿಬಿದ್ದಿವೆ. ಉತ್ತರಹಳ್ಳಿಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತ್ತು.

ನಗರದ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ತಂಪಿನ ಗಾಳಿಯೂ ಬೀಸುತ್ತಿತ್ತು. ಆಗಾಗ ಬಿಸಿಲು ಕಾಣಿಸಿಕೊಂಡರೂ ಹೆಚ್ಚು ಸಮಯ ಇರಲಿಲ್ಲ. ಸಂಜೆ ವೇಳೆ ಜೋರಾಗಿ ಗಾಳಿ ಸಮೇತ ಮಳೆ ಬರಲಾರಂಭಿಸಿತ್ತು.

ರಾಜರಾಜೇಶ್ವರಿನಗರ, ಕೆಂಗೇರಿ, ನಾಯಂಡಹಳ್ಳಿ, ದೀಪಾಂಜಲಿ ನಗರ, ವಿಜಯನಗರ, ರಾಜಾಜಿನಗರ, ಯಶವಂತಪುರ, ಪೀಣ್ಯ, ಮಲ್ಲೇಶ್ವರ, ಶೇಷಾದ್ರಿಪುರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಸಂಜಯನಗರ, ಹೆಬ್ಬಾಳ, ಆರ್‌.ಟಿ.ನಗರ, ಗಂಗಾನಗರ, ವಸಂತನಗರ, ಪುಲಿಕೇಶಿನಗರ, ಹೆಣ್ಣೂರು, ಬಾಣಸವಾಡಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆಯಿತು.

ADVERTISEMENT

ಮೆಜೆಸ್ಟಿಕ್, ಗಾಂಧಿನಗರ, ಚಿಕ್ಕಪೇಟೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಶಿವಾಜಿನಗರ, ಅಶೋಕನಗರ, ಕೋರಮಂಗಲ, ಮಡಿವಾಳ, ಜಯನಗರ, ಬಸವನಗುಡಿ, ಬನಶಂಕರಿ, ಹನುಮಂತನಗರ, ಗಿರಿನಗರ, ಕೋರಮಂಗಲ, ಮಡಿವಾಳ, ಎಂ.ಜಿ.ರಸ್ತೆ, ಶಿವಾಜಿನಗರ, ಅಶೋಕನಗರ, ಹಲಸೂರು, ವಿವೇಕನಗರ, ಹಲಸೂರು ಗೇಟ್, ಲಾಲ್‌ಬಾಗ್, ಶಾಂತಿನಗರ, ವಿಲ್ಸನ್ ಗಾರ್ಡನ್ ಹಾಗೂ ಸುತ್ತಮುತ್ತ ಮಳೆ ಸುರಿಯಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಮಳೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಧಾರಾಕಾರವಾಗಿ ಹರಿದ ನೀರು:ಗಾಂಧಿನಗರ, ಮೆಜೆಸ್ಟಿಕ್, ಶಿವಾನಂದ ವೃತ್ತ, ಚಿಕ್ಕಪೇಟೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಹಾಗೂ ಇತರೆಡೆ ಕಾಮಗಾರಿಗಳು ನಡೆಯುತ್ತಿವೆ. ಈ ಭಾಗದಲ್ಲಿ ರಸ್ತೆಗಳು ಬಹುತೇಕ ಜಲಾವೃತವಾಗಿತ್ತು.

ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ರಸ್ತೆ ಅಗೆಯಲಾಗಿದ್ದು, ಅದರ ಮಣ್ಣನ್ನು ಎಲ್ಲೆಂದರಲ್ಲಿ ಹಾಕಲಾಗಿದೆ. ಮಳೆ ಬಿದ್ದಿದ್ದರಿಂದ ಮಣ್ಣು, ನೀರಿನ ಜೊತೆಯಲ್ಲಿ ಸೇರಿ ಕೆಸರಾಗಿತ್ತು.

ಭಾನುವಾರ ರಜೆ ದಿನವಾಗಿದ್ದರಿಂದ ಜನರ ಓಡಾಟ ಕಡಿಮೆ ಇತ್ತು. ಮಾರುಕಟ್ಟೆ ಹಾಗೂ ಇತರೆ ಕೆಲಸಕ್ಕಾಗಿ ಬಂದಿದ್ದ ಜನ, ವಾಪಸು ಮನೆಗೆ ಹೋಗುವಾಗ ಮಳೆಯಲ್ಲಿ ಸಿಲುಕಿದ್ದರು. ರಸ್ತೆ ಅಕ್ಕ–ಪಕ್ಕದ ಮಳಿಗೆಗಳು, ಕೆಳಸೇತುವೆಗಳಲ್ಲಿ ಆಶ್ರಯ ಪಡೆದಿದ್ದರು.

ಮಾರುಕಟ್ಟೆ ಪ್ರದೇಶಗಳಲ್ಲಿ ಕೆಲವರು ಕೊಡೆ ಹಿಡಿದು ಹೆಜ್ಜೆ ಹಾಕಿದರು. ಕೆಲವರು, ಮಳೆಯಲ್ಲೇ ಸುತ್ತಾಡಿ ಸಂಭ್ರಮಿಸಿದರು.

ನಗರದ ಹಲವು ರಸ್ತೆಗಳಲ್ಲಿ ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದವು. ಅಂಥ ವಾಹನಗಳನ್ನು ಸ್ಥಳೀಯರೇ ತಳ್ಳಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.

ಬಹುತೇಕ ಕಡೆ ವಿದ್ಯುತ್ ವ್ಯತ್ಯಯ

‘ಧಾರಾಕಾರ ಮಳೆಯಿಂದಾಗಿ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲವೆಡೆ ಮರದ ಕೊಂಬೆಗಳು ಕಂಬ ಹಾಗೂ ತಂತಿ ಮೇಲೆ ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ತುರ್ತು ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.‌

‘ಜಯನಗರ, ವೈಟ್‌ಫೀಲ್ಡ್, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ 16 ವಿದ್ಯುತ್ ಕಂಬಗಳು ಬಿದ್ದಿವೆ. 17 ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದಿವೆ. ಇದರಿಂದ ತಂತಿಗಳು ತುಂಡರಿಸಿದ್ದು, ಮರು ಜೋಡಣೆ ನಡೆದಿದೆ’ ಎಂದೂ ಹೇಳಿದ್ದಾರೆ.

ಉರುಳಿದ ಮರಗಳು, ಸಂಚಾರ ವ್ಯಸ್ತ

ಬೆಂಗಳೂರು: ಜೋರು ಗಾಳಿ ಹಾಗೂ ಆಲಿಕಲ್ಲು ಸಹಿತವಾಗಿ ನಗರದ ವಿವಿಧೆಡೆ ಮಳೆ ಆಯಿತು. ಇದರಿಂದಾಗಿ ನಗರದ ಹಲವೆಡೆ ಮರಗಳು ಹಾಗೂ ಮರದ ಕೊಂಬೆಗಳು ಉರುಳಿಬಿದ್ದಿದ್ದವು. ಇದರಿಂದಾಗಿ ಕೆಲ ರಸ್ತೆಗಳಲ್ಲಿ ವಾಹನಗಳ ಓಡಾಟ ಬಂದ್ ಆಗಿತ್ತು.

ಬಿಟಿಎಂ 37ನೇ ಮುಖ್ಯರಸ್ತೆ, 15ನೇ ಮುಖ್ಯರಸ್ತೆ, ಐಎಎಸ್ ಅಧಿಕಾರಿಗಳ ಕಾಲೊನಿ, ಕೋರಮಂಗಲ, ಸದಾನಂದನಗರ, ಕೆಂಗೇರಿಯ ಮೈಲಸಂದ್ರ, ಹಗದೂರಿನ ಮುಖ್ಯರಸ್ತೆ, ವೈಟ್‌ಫೀಲ್ಡ್, ಮೈಕೊ ಲೇಔಟ್, ಗೊಟ್ಟಿಗೆರೆ, ಶ್ರೀರಾಮಪುರ, ಗಾಂಧಿನಗರ, ಬ್ಯಾಟರಾಯನಪುರ, ಇತರೆ 20ಕ್ಕೂ ಹೆಚ್ಚು ಕಡೆ ಮರ ಹಾಗೂ ಕೊಂಬೆಗಳು ಬಿದ್ದಿದ್ದವು.

ಬಿಬಿಎಂಪಿ ಸಹಾಯವಾಣಿಗೆ ಕರೆಗಳು ಬರುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಸ್ಥಳೀಯರ ಜೊತೆ ಸೇರಿ ಮರಗಳನ್ನು ತೆರವು ಮಾಡಿದರು. ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟರು.

ಮೆಜೆಸ್ಟಿಕ್‌ನ ಕೆ.ಜಿ. ರಸ್ತೆಯಲ್ಲಿ ಬಿಎಂಟಿಸಿ ಬಸ್‌ ಮೇಲೆಯೇ ಮರ ಬಿದ್ದಿತ್ತು. ಚಾವಣಿ ಜಖಂಗೊಂಡಿತ್ತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್ಸಿನಿಂದ ಕೆಳಗೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.