ADVERTISEMENT

ವಸತಿಗೃಹದಲ್ಲಿ ವಾಸ: ಕಳ್ಳತನ ಮಾಡಿ ಪರಾರಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 21:50 IST
Last Updated 2 ಅಕ್ಟೋಬರ್ 2022, 21:50 IST
   

ಬೆಂಗಳೂರು: ನಗರದ ಹಲವೆಡೆ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿ ರಂಗಪ್ಪ ಅಲಿಯಾಸ್ ರಂಗನಾಥ್ ಎಂಬುವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಂಗಪ್ಪ, ಶಿರಾ ತಾಲ್ಲೂಕಿನ ಗೊಲ್ಲರಹಟ್ಟಿಯಲ್ಲಿ ವಾಸವಿದ್ದ. ಸಹಚರರ ಜೊತೆ ಆಗಾಗ ಬೆಂಗಳೂರಿಗೆ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದ. ಈತನನ್ನು ಬಂಧಿಸಿ ನಗದು ಜಪ್ತಿ ಮಾಡಲಾಗಿದೆ. ಸದ್ಯ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶ್ರೀಗಂಧದ ಮರ ಕಳ್ಳತನ ಪ್ರಕರಣದಲ್ಲಿ ರಂಗಪ್ಪ ಜೈಲು ಶಿಕ್ಷೆ ಅನುಭವಿಸಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರವೂ ಸಹಚರರ ಜೊತೆ ಸೇರಿ ಕಳ್ಳತನ ಮುಂದುವರಿಸಿದ್ದ.’

ADVERTISEMENT

‘ಕಳ್ಳತನಕ್ಕೆಂದು ನಗರಕ್ಕೆ ಬರುತ್ತಿದ್ದ ರಂಗಪ್ಪ ಹಾಗೂ ಸಹಚರರು, ವಸತಿಗೃಹದ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದರು. ಹಲವೆಡೆ ಸುತ್ತಾಡಿ, ಅಂಗಡಿಗಳು ಹಾಗೂ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಬೀಗ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಮಲ್ಲೇಶ್ವರ, ಕೊಡಿಗೇಹಳ್ಳಿ, ಯಲಹಂಕ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.