ADVERTISEMENT

ಉಕ್ಕಿನ ಸೇತುವೆ ವಿರುದ್ಧ ಮತ್ತೆ ಹೋರಾಟ

‘ಬೆಂಗಳೂರು ನಾಗರಿಕರ ಉತ್ಸವ’ದಲ್ಲಿ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 21:00 IST
Last Updated 14 ಫೆಬ್ರುವರಿ 2019, 21:00 IST
‘ಬೆಂಗಳೂರು ನಾಗರಿಕರ ಉತ್ಸವ’ದಲ್ಲಿ ಹುಳಿಮಾವಿನ ಯಕ್ಷ ಸಂಭ್ರಮ ತಂಡದವರು ಯಕ್ಷಗಾನ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ
‘ಬೆಂಗಳೂರು ನಾಗರಿಕರ ಉತ್ಸವ’ದಲ್ಲಿ ಹುಳಿಮಾವಿನ ಯಕ್ಷ ಸಂಭ್ರಮ ತಂಡದವರು ಯಕ್ಷಗಾನ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕುಡಿಯುವ ನೀರಿನ ಕೊರತೆ, ಕಸ ವಿಲೇವಾರಿ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧದ ನಿಯಮ ಉಲ್ಲಂಘನೆ, ಸಂಚಾರ ದಟ್ಟಣೆ ಹೆಚ್ಚಳ, ಕೆರೆಗಳ ಸಮಾಧಿ....

ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಬಿಎಂಪಿ ಸಹಭಾಗಿತ್ವದಲ್ಲಿ ‘ಐ ಚೇಂಜ್‌ ಮೈ ಸಿಟಿ’ ಗುರುವಾರ ಆಯೋಜಿಸಿದ್ದ 'ಬೆಂಗಳೂರು ನಾಗರಿಕರ ಉತ್ಸವ'ದಲ್ಲಿ ಸಾರ್ವಜನಿಕರು ಕಟ್ಟಿಕೊಟ್ಟ ನಗರದ ಪ್ರಮುಖ ಸಮಸ್ಯೆಗಳಿವು.

ರಂಗಕರ್ಮಿ ಪ್ರಕಾಶ್‌ ಬೆಳವಾಡಿ, 'ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಪಟ್ಟು ಹಿಡಿದಿದೆ. ಈ ಯೋಜನೆಯಿಂದ ನೂರಾರು ಮರಗಳನ್ನು ಕಳೆದುಕೊಳ್ಳುವುದು ಸರ್ಕಾರಕ್ಕೆ ಗೊತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಈ ಯೋಜನೆ ಕೈಬಿಟ್ಟು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.

ADVERTISEMENT

ವೈಟ್‌ಫೀಲ್ಡ್‌ ರೈಸಿಂಗ್‌ ಸಂಸ್ಥೆಯ ಅಂಜಲಿ ಸೈನಿ, 'ಪ್ರಸ್ತುತ ಸಂಚಾರ ದಟ್ಟಣೆಯಲ್ಲಿ ವಾಹನಗಳು ಒತ್ತೊತ್ತಾಗಿ ಜೋಡಿಸಿದ ಇಟ್ಟಿಗೆಗಳಂತಿರುತ್ತವೆ. ಜನಪ್ರತಿನಿಧಿಗಳು ‌ಪಕ್ಷದ ಸಿದ್ಧಾಂತಗಳನ್ನು ಬದಿಗೊತ್ತಿ ಬೆಂಗಳೂರನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು.ನಾಗರಿಕರೂ ಸಂಚಾರ ನಿಯಮಗಳನ್ನು ಪಾಲಿಸುವುದು ಮುಖ್ಯ’ ಎಂದು ಹೇಳಿದರು.

ವಾಸ್ತುಶಾಸ್ತ್ರಜ್ಞ ನರೇಶ್ ನರಸಿಂಹನ್‌, 'ಕೆರೆ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅವಕಾಶ ಕೊಟ್ಟಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ, ‘ಸೊಳ್ಳೆಗಳು ಹೆಚ್ಚಾಗಿವೆ. ಆದ್ದರಿಂದ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ್ದೇವೆ’ ಎಂದು ಉತ್ತರಿಸಿದರು. ಈ ಉತ್ತರವನ್ನು ಕೇಳಿ ನನಗೆ ನಗುಬಂತು. ಸೊಳ್ಳೆಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳುವುದು ಬಿಟ್ಟು, ಕೆರೆಯನ್ನೇ ನುಂಗಲು ಮುಂದಾಗಿರುವುದು ಅಸಹ್ಯಕರ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿಗೆ ಮೆಟ್ರೊ ತರುವುದಾಗಿ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದೆ. ಯೋಜನೆಯಿಂದ ಅಲ್ಲಿನ ಸುಂದರ ಪರಿಸರದ ವಿನಾಶವಾಗಲಿದೆ. ಟ್ರಾಫಿಕ್‌ನಿಂದ ತತ್ತರಿಸಿರುವ ವೈಟ್‌ಫೀಲ್ಡ್‌ ಜನರಿಗೆ ಮೆಟ್ರೊ ಅವಶ್ಯವಿದೆ. ಇದನ್ನು ಸರ್ಕಾರ ಪರಿಗಣಿಸಬೇಕು’ ಎಂದು ತಿಳಿಸಿದರು.

'ನಗರದಲ್ಲಿ ಸಮಸ್ಯೆಗಳನ್ನು ಕಂಡು ಕಾಣದಂಥ ಅಧಿಕಾರಿಗಳು ನಮ್ಮಲ್ಲಿಯೇ ಹೆಚ್ಚಾಗಿದ್ದಾರೆ. ಜನರಿಗೆ ತೊಂದರೆ ಆಗದಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ಮುಂದಾಗಬೇಕು’ ಎಂದು ಮೀರಾ ಹೇಳಿದರು. ‌

ಉತ್ಸವದಲ್ಲಿ ಆಯೋಜಿಸಿದ್ದ ಅಣುಕು ಮತ್ತು ಜಾಗೃತಿ ಪ್ರದರ್ಶನಗಳನ್ನು ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮತ್ತು ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್ ಅವರು ವೀಕ್ಷಿಸಿದರು.

ಜಾಗೃತಿ ಪ್ರದರ್ಶನಗಳು

ಬೀದಿಯಲ್ಲಿ ಕಸ ಬೀಸಾಡುವುದರಿಂದ ಉಂಟಾಗುವ ಸಮಸ್ಯೆಗಳು, ಕಸ ವಿಂಗಡಣೆ ಮಾಡುವುದರಿಂದಾಗುವ ಉಪಯೋಗ, ಪ್ಲಾಸ್ಟಿಕ್ ಮರು ಬಳಕೆಯಿಂದಾಗ ಉಪಯೋಗ, ಕೆರೆಗಳ ಉಳಿವಿಗೆ ಸಂಬಂಧಿಸಿದಂತೆ ವಿವರ, ತೋಟಗಾರಿಕೆಯಿಂದಾಗುವ ಪ್ರಯೋಜನ, ನೀರನ್ನು ಮಿತವಾಗಿ ಬಳಸಲು ಸಂದೇಶ, ರಸ್ತೆ ಸುರಕ್ಷತೆ...ಮತ್ತುಅಗ್ನಿಶಾಮಕ ಉಪಕರಣಗಳ ವಸ್ತು ಪ್ರದರ್ಶನ, ನಮ್ಮ ಮೆಟ್ರೊದ ಸಂಪೂರ್ಣ ವಿವರಣೆ, ಬಿಎಂಟಿಸಿ ಬಸ್‌ಗಳ ಮಾಹಿತಿ...ನಗರದಲ್ಲಿ ಸಾರ್ವಜನಿಕರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಆಯಾ ವಿಭಾಗದ ಅಧಿಕಾರಿಗಳು ವಿವರಿಸಿದರು. ಶಾಲಾ ಮಕ್ಕಳು ಮತ ಚಲಾಯಿಸುವುದರ ಬಗ್ಗೆ ಬೀದಿ‌ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.