ADVERTISEMENT

ಪೊಲೀಸರು ಹಣ ವಸೂಲಿಗಾರರಂತೆ ವರ್ತಿಸಬಾರದು: ಕಿಡಿ ಕಾರಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:16 IST
Last Updated 20 ಜೂನ್ 2019, 20:16 IST
   

ಬೆಂಗಳೂರು: ‘ಪೊಲೀಸರು ಹಣ ವಸೂಲಿಗಾರರಂತೆ ವರ್ತಿಸಬಾರದು’ ಎಂದು ಹೈಕೋರ್ಟ್‌ ಕಿಡಿ ಕಾರಿದೆ.

ಸಿವಿಲ್‌ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಚ್‌.ಎಸ್‌.ಚಂದ್ರಮೌಳಿ, ‘ಇದೊಂದು ಸಿವಿಲ್ ವ್ಯಾಜ್ಯ. ಪೊಲೀಸರು ಈ ಪ್ರಕರಣದ ತನಿಖೆ ನಡೆಸಿರುವುದು ತಪ್ಪು. ಪ್ರಕರಣ ರದ್ದುಪಡಿಸಲು ಪ್ರಾಸಿಕ್ಯೂಷನ್‌ ಆಕ್ಷೇಪಣೆ ಇಲ್ಲ’ ಎಂದರು.

ADVERTISEMENT

ಈ ಮಾತಿಗೆ ನ್ಯಾಯಮೂರ್ತಿಗಳು, ‘ಪೊಲೀಸರು ಸಿವಿಲ್‌ ವ್ಯಾಜ್ಯಗಳಲ್ಲಿ ಪೊಲೀಸರು ಏಕೆ ತಲೆ ಹಾಕುತ್ತಾರೆ, ಅವರೇನು ಸಿವಿಲ್‌ ಕೋರ್ಟ್‌ ಅಧಿಕಾರ ಹೊಂದಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಇಂತಹ ಪ್ರಕರಣ ಮರುಕಳಿಸಿದರೆ ಸಂಬಂಧಿಸಿದ ಅಧಿಕಾರಿಗಳನ್ನು ಕೋರ್ಟ್‌ ಸುಮ್ಮನೆ ಬಿಡುವುದಿಲ್ಲ’ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದ ನಗರದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮತ್ತು ಇನ್ಸ್‌ಪೆಕ್ಟರ್ ಮಹೇಶ್, ‘ಇಂತಹ ಪ್ರಕರಣ ಮರುಕಳಿಸುವುದಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ನ್ಯಾಯಮೂರ್ತಿ ಸಹಿ ನಕಲು: ದೂರು
ಬೆಂಗಳೂರು: ಹೈಕೋರ್ಟ್‌ ನ್ಯಾಯಮೂರ್ತಿ ಕೆ. ನಟರಾಜನ್‌ ಅವರ ಸಹಿ ನಕಲು ಮಾಡಿದ ಆರೋಪದಲ್ಲಿ ಅಪರಿಚಿತರ ವಿರುದ್ಧ ‌ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಹೈಕೋರ್ಟ್‌‌ ಕ್ರಿಮಿನಲ್‌ ಶಾಖೆಯ ಡೆಪ್ಯೂಟಿ ರಿಜಿಸ್ಟ್ರಾರ್‌ ಅನಿತಾ ದೂರು ನೀಡಿದ್ದಾರೆ.

ಉತ್ತರ ಪ್ರದೇಶದ ವಿಕ್ಕಿ ಸಿಂಗ್‌ ಮತ್ತು ವಿಶಾಲ್‌ ಸಿಂಗ್‌ ಎಂಬುವರಿಗೆ ಸಂಬಂಧಿಸಿದ ಪತ್ರವೊಂದು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ಕಚೇರಿಯಿಂದ ಜೂನ್‌ 11ರಂದು ಅನಿತಾ ಅವರಿಗೆ ಬಂದಿತ್ತು. ಆ ಪತ್ರದಲ್ಲಿ ಈ ಇಬ್ಬರ ಮೇಲೆ ಹಲವು ಮೊಕದ್ದಮೆಗಳಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅಲ್ಲದೆ, ಈ ಸಂಬಂಧ ಜಾಮೀನುರಹಿತ ವಾರೆಂಟ್‌ನ್ನು ಉತ್ತರ ಪ್ರದೇಶದ ಡಿಜಿ ಮೂಲಕ ಹೊರಡಿಸಿದ್ದು, ಇದನ್ನು ತಡೆಯಲು ಹೈಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್‌ (ಕ್ರಿಮಿನಲ್ ಶಾಖೆ) ಆದೇಶದಂತೆ ದಾಖಲೆಗಳನ್ನೂ ಸಲ್ಲಿಸಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.

ಇದನ್ನು ಪರಿಶೀಲಿಸಿದಾಗ ಸಹಾಯಕ ರಿಜಿಸ್ಟ್ರಾರ್‌ ಅವರು ಈ ರೀತಿಯ ಯಾವುದೇ ಆದೇಶ ಹೊರಡಿಸಿಲ್ಲ ಎನ್ನುವುದು ಗೊತ್ತಾಗಿತ್ತು. ‌ಅಪರಿಚಿತರು ಸುಳ್ಳು ಆದೇಶವನ್ನು ಸೃಷ್ಟಿಸಿ ನ್ಯಾಯಮೂರ್ತಿಯ ಸಹಿ ನಕಲು ಮಾಡಿರುವುದು ಗೊತ್ತಾಗಿದೆ.‌ ಈ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.