ADVERTISEMENT

‘ಶಿಕ್ಷಕರ ಸಿ.ಎಲ್‌ 15 ದಿನಗಳೇ ಇರಲಿ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:44 IST
Last Updated 17 ಆಗಸ್ಟ್ 2019, 19:44 IST
ಶಿಕ್ಷಕರು – ಸಾಂದರ್ಭಿಕ ಚಿತ್ರ
ಶಿಕ್ಷಕರು – ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಶಿಕ್ಷಕರ ಸಾಂದರ್ಭಿಕ ರಜೆಗಳನ್ನು (ಸಿ.ಎಲ್‌) 15ರಿಂದ 10 ದಿನಗಳಿಗೆ ಇಳಿಸಿರುವ ನಿರ್ಧಾರ ಸೂಕ್ತವಲ್ಲ. ಈ ಮೊದಲಿದ್ದಂತೆ 15 ಸಿ.ಎಲ್‌ಗಳನ್ನೇ ಮುಂದುವರಿಸಬೇಕು’ ಎಂದು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಸಂಘಗಳ ಮುಖ್ಯಸ್ಥರ ಸಭೆ ಆಗ್ರಹಿಸಿದೆ.

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವತಿಯಿಂದ ಶಾಸಕರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಶೈಕ್ಷಣಿಕ ಅವಧಿ ಹಾಗೂ ರಜೆ’ ಒಂದು ಚರ್ಚೆಯಲ್ಲಿ ಈ ಕುರಿತಂತೆ ನಿರ್ಣಯ ಕೈಗೊಳ್ಳಲಾಗಿದೆ.

‘ಮಕ್ಕಳ ವಾರ್ಷಿಕ ಕಲಿಕಾ ಅವಧಿಯ ದಿನಗಳು ಮನೋವಿಜ್ಞಾನದ ಆಧಾರದಲ್ಲಿ ನಿಗದಿಯಾಗಬೇಕು. ಈ
ದಿಸೆಯಲ್ಲಿ ಮನೋವಿಜ್ಞಾನಿಗಳನ್ನು ಒಳಗೊಂಡ ಸಮಗ್ರ ಅಧ್ಯಯನ ನಡೆಯಬೇಕು. ಶಿಕ್ಷಕರ ಮೇಲಿನ ಒತ್ತಡದ ಪ್ರಮಾಣ ಮತ್ತು ಅವರ ಎಷ್ಟು ಕೆಲಸ ನಿರ್ವಹಿಸಬೇಕು ಎಂಬುದನ್ನು ಪರಾಂಬರಿಸಿ ವರದಿ ಸಿದ್ಧಪಡಿಸಬೇಕು’ ಎಂದು ಸಭೆ ನಿರ್ಣಯಿಸಿತು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ ಮಾತನಾಡಿ, ‘ಶೈಕ್ಷಣಿಕ ಹಾಗೂ ರಜೆಗಳ ಅವಧಿ ನಿರ್ಣಯವು, ಆಳುವ ಸರ್ಕಾರದ ಜೊತೆಗಿನ ಬೇಡಿಕೆ–ನೀಡಿಕೆಯ ವಿಷಯವಾಗಬಾರದು. ಇದೊಂದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ವೈಜ್ಞಾನಿಕ ಆಧಾರದಲ್ಲಿ ಅಧ್ಯಯನ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತಾಗಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ‘ಅನಪೇಕ್ಷಿತ ಯೋಜನೆಗಳನ್ನು ತೆಗೆದು ಹಾಕುವ ಮೂಲಕ ಶಿಕ್ಷಕರ ಶಿಕ್ಷಕರ ಕತ್ತೆ ಚಾಕರಿ ನಿಲ್ಲಿಸಬೇಕು. ಯಾರನ್ನು ಖುಷಿಪಡಿಸಲು ಈ ಯೋಜನೆಗಳನ್ನು ಮುಂದುವರಿಸಲಾಗುತ್ತಿದೆ’ ಎಂದು ಪ್ರಶ್ನಿಸಿದರು.

‘ಹಾಲಿ 45ರಿಂದ 50ಯೋಜನೆಗಳು ಅನಗತ್ಯ ಹೊರೆಯಾಗಿವೆ. ಶಿಕ್ಷಕರ ವಿಶ್ರಾಂತಿಯ ಅವಧಿ ಕುಂಠಿತವಾಗಿದೆ. ಇದರಿಂದ ಮಕ್ಕಳ ಕಲಿಕಾ ಪ್ರಗತಿಗೂ ಧಕ್ಕೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮಕ್ಕಳು ರಜೆ ಅನುಭವಿಸಲಿ: ‘ಮಕ್ಕಳುಉಲ್ಲಾಸದಿಂದ ಕಲಿಕೆಯಲ್ಲಿ ತೊಡಗಲು ರಜೆಗಳು ಅವಶ್ಯಕ. ವೃಥಾ ಅವರನ್ನು ಓದುವ ಕ್ರಿಯೆಯಲ್ಲಿ ತೊಡಗಿಸುವುದು, ಹೊರೆ ಹೆಚ್ಚಿಸುವುದು ಒಳ್ಳೆಯ ಲಕ್ಷಣವಲ್ಲ’ ಎಂದು ನಿಮ್ಹಾನ್ಸ್‌ನ ವೈದ್ಯರು ಮತ್ತು ಮಕ್ಕಳ ಕಲಿಕಾ ವಿಷಯದ ತಜ್ಞರೂ ಆದ ಡಾ.ರಾಜೇಂದ್ರ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.