ADVERTISEMENT

ಸೀಳು ತುಟಿ: ಶಸ್ತ್ರಚಿಕಿತ್ಸೆ ಬಗ್ಗೆ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 16:24 IST
Last Updated 29 ಜುಲೈ 2025, 16:24 IST
   

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಳು ತುಟಿ ಮತ್ತು ಸೀಳು ಅಂಗುಳಿನ ಶಸ್ತ್ರಚಿಕಿತ್ಸೆ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರವು ‘ಸೀಳು ಆರೈಕೆ ಮಾರ್ಗದರ್ಶನ ಕಾರ್ಯಕ್ರಮ’ಕ್ಕೆ ಅನುಮೋದನೆ ನೀಡಿದೆ. 

ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ. 

ಕಳೆದ ಐದು ವರ್ಷಗಳಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಕೇವಲ 20  ಸೀಳು ತುಟಿ ಮತ್ತು ಸೀಳು ಅಂಗುಳಿನ ಶಸ್ತ್ರಚಿಕಿತ್ಸೆ ಕಾರ್ಯವಿಧಾನಗಳನ್ನು ನಡೆಸಲಾಗಿದೆ. ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳು ಯೋಜನೆಯಡಿ ಈ ಕಾರ್ಯವಿಧಾನವನ್ನು ನಡೆಸುತ್ತಿವೆ. ಈ ಚಿಕಿತ್ಸೆಯನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲು ‘ಸೀಳು ಆರೈಕೆ ಮಾರ್ಗದರ್ಶನ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ. 

ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಮೂಲಸೌಕರ್ಯಗಳನ್ನು ಗುರುತಿಸಿ, ಅಲ್ಲಿ ಸೀಳು ತುಟಿ ಮತ್ತು ಸೀಳು ಅಂಗುಳಿನ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳು ಅಥವಾ ಮಾನವ ಸಂಪನ್ಮೂಲವನ್ನು ಒದಗಿಸುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸೂಚಿಸಲಾಗಿದೆ.

ತಾಂತ್ರಿಕ ತಜ್ಞರ ಸಮಿತಿಯು ನಿರ್ಧರಿಸಿದಂತೆ, ಅರ್ಹತಾ ಮಾನದಂಡಗಳ ಆಧಾರದ ಮೇಲೆ ಮಾರ್ಗದರ್ಶಕ ಶಸ್ತ್ರಚಿಕಿತ್ಸಕರ ಗುಂಪನ್ನು ಸಿದ್ಧಪಡಿಸಬೇಕು. ಫಲಾನುಭವಿಗಳಿಗೆ ಮಾರ್ಗದರ್ಶಕ ಶಸ್ತ್ರಚಿಕಿತ್ಸಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ನೀಡುವ ಜತೆಗೆ ಇತರ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.