ADVERTISEMENT

ಶರವಣಗೆ ಟಿಕೆಟ್‌ ನೀಡಲು ಎಚ್‌ಡಿಕೆ ಹಣ ಪಡೆದಿಲ್ಲವೆ?: ಸಿ.ಎಂ. ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 14:04 IST
Last Updated 20 ನವೆಂಬರ್ 2023, 14:04 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಬೆಂಗಳೂರು: ‘ಟಿ.ಎ. ಶರವಣ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲು ಹಣ ಪಡೆದಿಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಮಗನ ಮೇಲೆ ಪ್ರಮಾಣ ಮಾಡಲು ಸಿದ್ಧವೇ?’ ಎಂದು ಜೆಡಿಎಸ್‌ನಿಂದ ಅಮಾನತುಗೊಂಡಿರುವ ಮುಖಂಡ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಆ ಶೆಟ್ಟರಿಗೆ (ಶರವಣ) ಟಿಕೆಟ್‌ ಕೊಟ್ಟರಲ್ಲಾ ಆವಾಗ ಏನು ಮಾಡಿದರು ಎಂಬುದನ್ನು ಹೇಳುವ ಧೈರ್ಯ ಇದೆಯಾ? ಇದೆಲ್ಲ ನೀವೂ ಮಾಡಿ ಮಾತನಾಡೋದಾ’ ಎಂದು ಕೇಳಿದರು.

‘ನಿಮಗೆ ಒಬ್ಬ ಮಗ ಇದ್ದಾನೆ. ಸಿದ್ದರಾಮಯ್ಯನಿಗೂ ಒಬ್ಬನೇ ಮಗ ಇರೋದು. ಒಬ್ಬ ಮಗ ತೀರಿಕೊಂಡು ಹೋದ ಪಾಪ. ಯತೀಂದ್ರ ಅವರ ಅಪ್ಪನ ಕ್ಷೇತ್ರ ನೋಡಿಕೊಳ್ಳುತ್ತಿದ್ದಾನೆ. ಏನೋ ಈ ಹುಡುಗ ಬೆಳೀತಾ ಇದ್ದಾನೆ. ಅವನು ಬೆಳೆದಂತೆ ನೀನೂ ಬೆಳಿಯಪ್ಪ ಅಂತಾ ನಿಮ್ಮ ಮಗನನ್ನು ಬೆನ್ನು ತಟ್ಟುವುದು ಬಿಟ್ಟು, ಸೂಪರ್‌ ಸಿಎಂ, ಡಿಸಿಎಂ ಎಂದು ಹೇಳುವುದು ಸಣ್ಣತನದ ಪರಮಾವಧಿ’ ಎಂದು ಟೀಕಿಸಿದರು.

ADVERTISEMENT

ಅಧ್ಯಕ್ಷರ ಬದಲಾವಣೆಗೆ ಸ‌ಜ್ಜು: ‘ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರಿಗೆ ಬಿಜೆಪಿ ಸಖ್ಯ ತೊರೆದು ಬರುವಂತೆ ಈಗಲೂ ಮನವಿ ಮಾಡುತ್ತೇವೆ. ಮೈತ್ರಿಯಿಂದ ಹಿಂದೆ ಸರಿಯದಿದ್ದರೆ ಡಿಸೆಂಬರ್‌ 9ರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೇ ಬದಲಾವಣೆ ಮಾಡುವ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರ ಮಗನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಆರ್‌. ಅಶೋಕ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇನ್ನು ಬಿಜೆಪಿಯವರು ದೇವೇಗೌಡರನ್ನು ಏನಾದರೂ ಕೇಳುತ್ತಾರಾ? ಜೆಡಿಎಸ್‌ನವರಿಗೆ ಏನು ಉಳಿದಿದೆ? 19 ಜನ ಶಾಸಕರಲ್ಲಿ 17 ಮಂದಿ ಗೌಡರ ಕುಟುಂಬದ ಜೊತೆ ಇಲ್ಲ’ ಎಂದರು.

ಜೆಡಿಎಸ್‌ನಿಂದ ತಮ್ಮನ್ನು ಅಮಾನತು ಮಾಡಿರುವ ತೀರ್ಮಾನಕ್ಕೆ ಬೆಲೆ ಇಲ್ಲ. ತಾವು ಪಕ್ಷದ ರಾಜ್ಯ ಘಟಕದ ಚುನಾಯಿತ ಅಧ್ಯಕ್ಷ. ತಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ರಾಷ್ಟ್ರೀಯ ಕಾರ್ಯಕಾರಿಣಿಯ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕು. ಯಾರು ಬೆಂಬಲ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.