ADVERTISEMENT

ಮೇ 21ರಂದು ನಗರ ಪ್ರದಕ್ಷಿಣೆ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಮೇ 2025, 21:32 IST
Last Updated 19 ಮೇ 2025, 21:32 IST
<div class="paragraphs"><p>ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ‘ವಾರ್‌ರೂಂ’ಗೆ ಸೋಮವಾರ ಸಂಜೆ ಭೇಟಿ ನೀಡಿದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರಿಗೆ&nbsp;ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್ ಪರಿಸ್ಥಿತಿಯನ್ನು ವಿವರಿಸಿದರು. ಶಾಸಕರಾದ ಎಂ.ಆರ್‌. ಸೀತಾರಾಂ, ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು</p></div>

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ‘ವಾರ್‌ರೂಂ’ಗೆ ಸೋಮವಾರ ಸಂಜೆ ಭೇಟಿ ನೀಡಿದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರಿಗೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್ ಪರಿಸ್ಥಿತಿಯನ್ನು ವಿವರಿಸಿದರು. ಶಾಸಕರಾದ ಎಂ.ಆರ್‌. ಸೀತಾರಾಂ, ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸೋಮವಾರ ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಜನರಿಗೆ ತೊಂದರೆಯಾಗುತ್ತದೆ ಎಂದು ಮನಗಂಡು, ಮೇ 21ರಂದು ಇಡೀ ನಗರದ ಪ್ರದಕ್ಷಿಣೆ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರಿನ ಶಾಸಕರೊಂದಿಗೆ ನಗರ ಪ್ರದಕ್ಷಿಣೆ ಮಾಡಲಾಗುವುದು. ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಾಗುವುದು. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಕೊಡಲಾಗುವುದು ಎಂದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ‘ವಾರ್‌ರೂಂ’ಗೆ ಭೇಟಿ ನೀಡಿ, ನಗರದ ಹಲವು ಪ್ರದೇಶಗಳಲ್ಲಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಆಳವಿಲ್ಲದೆ ಚಿಕ್ಕದಾಗಿದ್ದು, ಹೂಳು ತುಂಬಿದೆ. ಇದನ್ನು ತೆರವು ಮಾಡಲು ನಗರಪಾಲಿಕೆಯವರಿಗೆ ಅನೇಕ ಬಾರಿ ಸೂಚನೆ ನೀಡಲಾಗಿದ್ದು, ಇನ್ನೂ ಕಾಮಗಾರಿಗಳು ನಡೆಯುತ್ತಿವೆ. 859.90 ಕಿ.ಮೀ  ಉದ್ದದ ರಾಜಕಾಲುವೆಗಳಲ್ಲಿ 195 ಕಿ.ಮೀ ಉದ್ದದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು, 173 ಕಿ.ಮೀ ಉದ್ದದ ರಾಜಕಾಲುವೆಗಳನ್ನು ₹2 ಸಾವಿರ ಕೋಟಿ ವೆಚ್ಚದಲ್ಲಿ ವಿಶ್ವಬ್ಯಾಂಕ್‌ ವತಿಯಿಂದ ಕೈಗೊಳ್ಳಲಾಗಿದೆ. ನಗರದಲ್ಲಿ ಸುಮಾರು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತು ಮಾಡಲಾಗಿದೆ. 166 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 24 ಕಾಮಗಾರಿ ಪ್ರಗತಿಯಲ್ಲಿದ್ದು, ಇವು ಪೂರ್ಣಗೊಂಡರೆ ಈ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ರಾಜಕಾಲುವೆಗಳು 4,292 ಸ್ಥಳಗಳಲ್ಲಿ ಒತ್ತುವರಿಯಾಗಿದ್ದು, ಈ ಪೈಕಿ 2,326 ಸ್ಥಳಗಳ ಒತ್ತುವರಿಯನ್ನು ತೆರವುಗೊಳಿಸ ಲಾಗಿದೆ. ಒತ್ತಿವರಿಯಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಸರ್ಕಾರ ಶ್ರೀಮಂತರು, ಬಡವರು ಎಂದು ತಾರತಮ್ಯ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿಯವರು ಪ್ರಶ್ನೆಗೆ ಉತ್ತರಿಸಿದರು.

ಶೇ 70ರಷ್ಟು ‌ಪ್ರದೇಶಗಳ ಸಮಸ್ಯೆ ‌ನಿವಾರಣೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ‘ಮಳೆ ನೀರಿನಿಂದ ಉಂಟಾಗುವ ಅವಘಡಗಳನ್ನು ತಪ್ಪಿಸಲು ಮೊದಲೇ ಸಜ್ಜಾಗಿದ್ದೆವು. ನಾವು ಶೇ 70ರಷ್ಟು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ. ಈಗಾಗಲೇ ಇಡೀ ಬೆಂಗಳೂರಿನಾದ್ಯಂತ 197 ಕಿಮೀ ಉದ್ದದ ಮಳೆನೀರುಗಾಲುವೆ ನಿರ್ಮಾಣದ ಕೆಲಸ ನಡೆಯುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸಿಲ್ಕ್‌ ಬೋರ್ಡ್‌ ಹಾಗೂ ರಾಜರಾಜೇಶ್ವರಿನಗರ ಆರ್ಚ್‌ ಬಳಿ ಮಳೆನೀರಿನಿಂದ ಉಂಟಾದ ಪರಿಸ್ಥಿತಿಯನ್ನು ಸೋಮವಾರ ರಾತ್ರಿ ಅವಲೋಕಿಸಿ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.

‌‘ಮಳೆ ಎಂಬುದು ಪ್ರಕೃತಿಯ ನಿಯಮ. ನಾವು ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದೇವೆ. ಉಂಟಾಗಿರುವ ಸಮಸ್ಯೆ ಗಳನ್ನು ನಿವಾರಣೆ ಮಾಡಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರಿನ ಜನತೆ ಯಾವುದೇ ಕಾರಣಕ್ಕೂ ಗಾಬರಿಗೆ ಒಳಗಾಗುವುದು ಬೇಡ’ ಎಂದರು.

‘ಸಿಲ್ಕ್‌ ಬೋರ್ಡ್ ಹೆಬ್ಬಾಳದ‌ ನಂತರದ‌ ಭಾಗ ಯಲಹಂಕದಲ್ಲಿ ಹೆಚ್ಚು ಮಳೆ ಸುರಿದಿದೆ. ಇಲ್ಲಿ ಒಂದೆರಡು ಕಡೆ ರೈಲ್ವೆ ಅಂಡರ್ ಪಾಸ್ ಕೆಲಸ ನಡೆಯುತ್ತಿದೆ. ಆ ಕಾರಣ ನೀರು ನಿಂತು ಹೆಚ್ಚು ತೊಂದರೆಯಾಗುತ್ತಿದೆ. ಆದ್ದರಿಂದ ಆ ಇಲಾಖೆಯವರ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

‘ಕುಮಾರಸ್ವಾಮಿ ಗ್ರೇಟರ್ ಬೆಂಗಳೂರಲ್ಲ ಲೂಟರ್ ಬೆಂಗಳೂರು’ ಎಂದು ಕರೆದಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ‘ಕುಮಾರಸ್ವಾಮಿ ಹಾಗೂ ಬಿಜೆಪಿಯ ನಾಯಕರು ಹತಾಶೆಯ ಮನುಷ್ಯರು’ ಎಂದರು.

‘ಗ್ರೇಟರ್‌ ಬೆಂಗಳೂರು ವಾಟರ್ ಬೆಂಗಳೂರಾಗಿದೆ’ ಎನ್ನುವ ವಿಪಕ್ಷಗಳ ಟೀಕೆಗಳ ಬಗ್ಗೆ ಸುದ್ದಿಗಾರರು ಕೇಳಿದಾಗ‌ ‘ನಾವು ಬೆಂಗಳೂರಿನ‌ ಎಷ್ಟು ಸಮಸ್ಯೆಗಳನ್ನು ನಿವಾರಿಸಿದ್ದೇವೆ ಎಂಬುದರ ಬಗ್ಗೆ ನಮ್ಮ ಜೊತೆ ಚರ್ಚೆಗೆ ಅವರು ಬರಲಿ.‌‌ ಕೇವಲ ಆರೋಪ ಮಾಡಿ ಹಿಟ್ ಅಂಡ್ ರನ್ ಮಾಡುವುದಲ್ಲ.‌ ಅವರು ಪಟ್ಟಿ ಮಾಡಿಕೊಂಡು ಬರಲಿ’ ಎಂದು ಹೇಳಿದರು.

‘ರಸ್ತೆ ವಿಸ್ತರಣೆಗೆ ಅಕ್ಕಪಕ್ಕದ ಕಟ್ಟಡಗಳನ್ನು ಒಡೆಯಬೇಕಾಗುತ್ತದೆ. ಇದು ಸಾಕಷ್ಟು ವೆಚ್ಚದಾಯಕ‌.‌ ಈಗ ಮೇಲ್ಸೇತುವೆ ಹಾಗೂ ಸುರಂಗ ರಸ್ತೆಗಳೇ ಪರಿಹಾರ. ಜೊತೆಗೆ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸುತ್ತಿದ್ದೇವೆ. ₹1 ಲಕ್ಷ‌ ಕೋಟಿಗೂ ಅಧಿಕ ಹಣವನ್ನು ಮೆಟ್ರೊ ಪೆರಿಫೆರಲ್‌ ರಿಂಗ್‌ ರಸ್ತೆ ಬೆಂಗಳೂರು ಅಭಿವೃದ್ಧಿಗೆ ಹೂಡಿಕೆ ಮಾಡಿದ್ದೇವೆ’ ಎಂದರು.

ಮಾನ್ಯತಾ ಟೆಕ್‌ ಪಾರ್ಕ್ ಒತ್ತುವರಿ ಬಗ್ಗೆ ಕೇಳಿದಾಗ ‘ಈ ವಿಚಾರವಾಗಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರಕ್ಕೂ ಎಚ್ಚರಿಕೆ ನೀಡಿದ್ದೆವು. ಈಗ ಅಲ್ಲಿ ಸಮಸ್ಯೆ ಸರಿಪಡಿಸಿ ನೀರು ಹರಿಯಲು ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.