ADVERTISEMENT

ಸಿಎಂಪಿ: ‘ಪಕ್ಷ’ ರಾಜಕೀಯಕ್ಕೆ ಪಟ್ಟು

ಮೊದಲ ಸಭೆಯಲ್ಲೇ ಬಿಸಿಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 19:27 IST
Last Updated 20 ಜೂನ್ 2018, 19:27 IST

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ (ಸಿಎಂಪಿ) ಸಮಿತಿಯ ಮೊದಲ ಸಭೆಯಲ್ಲೇ ಉಭಯ ಪಕ್ಷಗಳು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಬಿಗಿಪಟ್ಟು ಹಿಡಿದಿವೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಜನಪರ ಯೋಜನೆಗಳ ಮುಂದುವರಿಕೆ ಮತ್ತು ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತು ನೀಡುವಂತೆ ಸಮಿತಿಯ ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು.

ರೈತರ ಸಾಲ ಮನ್ನಾ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ, ಆ ವಿಷಯಕ್ಕೆ ಆದ್ಯತೆ ನೀಡಬೇಕೆಂದು ಸಭೆಯಲ್ಲಿ ಎಚ್‌.ಡಿ. ರೇವಣ್ಣ ಆಗ್ರಹಿಸಿದರು. ಮೊದಲ ಹಂತದಲ್ಲೇ ಸಹಕಾರ ವಲಯದಲ್ಲಿ ರೈತರ ₹ 9 ಸಾವಿರ ಕೋಟಿ ಸಾಲ ಮನ್ನಾ ಮಾಡಬೇಕು, ಇದರಿಂದ 40 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ADVERTISEMENT

ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಹೇಗಿರಬೇಕು, ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿರುವ ಯಾವೆಲ್ಲ ಅಂಶಗಳನ್ನು ಸೇರಿಸಿಕೊಳ್ಳಬೇಕೆಂಬ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಮೊಯಿಲಿ, ‘ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಪಂಜಾಬ್‌ನಲ್ಲಿ ಸಾಲ ಮನ್ನಾ ಯಶಸ್ವಿಯಾಗಿದ್ದು, ಅಲ್ಲಿಂದಲೂ ಮಾಹಿತಿ ಪಡೆಯುತ್ತೇವೆ. ಇದೇ 25ಕ್ಕೆ ಮತ್ತೆ ಸಭೆ ಸೇರಲಿದ್ದೇವೆ’ ಎಂದರು.

ಸಮಿತಿ ಸದಸ್ಯರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಬಂಡೆಪ್ಪ ಕಾಶೆಂಪೂರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.