ಬೆಂಗಳೂರು: ‘ಸಹಕಾರಿ ಬ್ಯಾಂಕ್‌ಗಳು ದೇಶದ ಸದೃಢ ಆರ್ಥಿಕತೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ಈ ಬ್ಯಾಂಕ್‌ಗಳ ನೆರವಿನಿಂದ ಹಲವಾರು ಮಂದಿ ಸಣ್ಣ ಉದ್ಯಮ ಪ್ರಾರಂಭಿಸಿ, ಜೀವನ ಕಟ್ಟಿಕೊಳ್ಳುತ್ತಿದ್ದಾರೆ’ ಎಂದು ಮಲ್ಲೇಶ್ವರದ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ದಿ ಮೈಸೂರು ಸಿಲ್ಕ್ ಕ್ಲಾತ್ ಮರ್ಚೆಂಟ್ಸ್ ಕೋ–ಆಪರೇಟಿವ್ ಬ್ಯಾಂಕ್ ಇನ್ನು ಮುಂದೆ ‘ವಾಸವಿ ಎಂಎಸ್‌ಸಿಎಂ ಕೋ–ಆಪರೇಟಿವ್ ಬ್ಯಾಂಕ್’ ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ. ಬ್ಯಾಂಕ್, ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೂತನ ಹೆಸರು ಹಾಗೂ ಲಾಂಛನವನ್ನು ಅನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ‘ರಸ್ತೆ ಬದಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದವರು ಸಹಕಾರಿ ಬ್ಯಾಂಕ್‌ಗಳ ನೆರವಿನಿಂದ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಈ ಬ್ಯಾಂಕ್‌ಗಳಲ್ಲಿ ಸಾಲ ಪಡೆದು, ಹೊಸ ಹೊಸ ಉದ್ಯಮಗಳನ್ನು ಪ್ರಾರಂಭ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಬ್ಯಾಂಕ್‌ಗಳ ಆಡಳಿತ ಮಂಡಳಿ ವ್ಯವಹಾರದಲ್ಲಿ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
‘ನಮ್ಮ ದೇಶದ ಬಗ್ಗೆ ವಿದೇಶಿಗರ ಪರಿಕಲ್ಪನೆ ಈಗ ಬದಲಾಗಿದೆ. ಮೊದಲು ಭಾರತ ಎಂದರೆ ಕೇವಲ ಹಳ್ಳಿಗಳ ದೇಶ ಅಂದುಕೊಂಡಿದ್ದರು. ಈಗ ಬೆಂಗಳೂರು ಸೇರಿ ಇಲ್ಲಿನ ನಗರಗಳ ಬಗ್ಗೆ ಮಾತನಾಡುತ್ತಾರೆ. ಇಲ್ಲಿನ ಕಲೆ ಮತ್ತು ಸಂಸ್ಕೃತಿಗೂ ವಿಶ್ವದೆಲ್ಲೆಡೆ ಮನ್ನಣೆ ದೊರೆತಿದೆ. ಬೀಜ ಬಿತ್ತಿದರೆ ಲಕ್ಷದಷ್ಟು ಫಲ ಸಿಗುವ ಕಾಲ ಈಗ ದೇಶಕ್ಕೆ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಹಿಂದೆ ಚಿಕ್ಕದಾಗಿ ಪ್ರಾರಂಭವಾದ ವಿಜಯಾ, ಕರ್ಣಾಟಕ ಬ್ಯಾಂಕ್ ಬಳಿಕ ದೊಡ್ಡದಾಗಿ ಬೆಳೆದವು. ಆಡಳಿತ ಮಂಡಳಿ ಮೇಲೆ ನಂಬಿಕೆಯಿಟ್ಟು ಜನರು ಠೇವಣಿ ಇಟ್ಟಿರುತ್ತಾರೆ. ಆದ್ದರಿಂದ ಗ್ರಾಹಕರ ವಿಶ್ವಾಸ ಕಾಪಾಡಿಕೊಂಡು ಹೋಗಬೇಕು. ಆರ್ಯವೈಶ್ಯ ಸಮಾಜದವರು ಈಗಲೂ ವಿಶ್ವ ಪ್ರಸಿದ್ಧವಾದ ಅಗರಬತ್ತಿ, ವಸ್ತ್ರ ಉದ್ಯಮದಲ್ಲಿ ತೊಡಗಿಕೊಂಡಿದ್ದು, ವಿದ್ಯಾ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಬ್ಯಾಂಕ್‌ನ ಅಧ್ಯಕ್ಷ ಎನ್.ಎಸ್. ಶ್ರೀನಿವಾಸಮೂರ್ತಿ, ‘ರಾಜ್ಯದ ಎಲ್ಲೆಡೆ ಈ ಬ್ಯಾಂಕಿನ ಸೇವೆ ವಿಸ್ತರಿಸುವ ಉತ್ಸಾಹವನ್ನು ನಾವು ಹೊಂದಿದ್ದೇವೆ. ಕಳೆದ 56 ವರ್ಷಗಳಿಂದ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಶಿಸ್ತುಬದ್ಧವಾಗಿ ನಡೆದುಕೊಂಡು ಬಂದಿದ್ದೇವೆ. ರೇಷ್ಮೆ ಬಟ್ಟೆ ತಯಾರಕರ ಹಿತದೃಷ್ಟಿಯಿಂದ ಪ್ರಾರಂಭವಾದ ಈ ಬ್ಯಾಂಕ್, ಒಂದು ಲಕ್ಷಕ್ಕೂ ಅಧಿಕ ಸದಸ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.