ADVERTISEMENT

ಕುಸಿದ ತಾಪಮಾನ: ತೀವ್ರಗೊಂಡ ಚಳಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 21:01 IST
Last Updated 17 ಡಿಸೆಂಬರ್ 2021, 21:01 IST

ಬೆಂಗಳೂರು: ತಗ್ಗಿದ ಮಳೆ ಹಾಗೂ ಮೋಡರಹಿತ ವಾತಾವರಣ ಇರುವುದರಿಂದ ರಾಜ್ಯದಾದ್ಯಂತ ತಾಪಮಾನ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದ ಚಳಿಯ ತೀವ್ರತೆಯೂ ಹೆಚ್ಚಾಗಿದೆ.

ಬೀದರ್‌ ಹಾಗೂ ವಿಜಯಪುರದಲ್ಲಿ ಶುಕ್ರವಾರ ತಲಾ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಗಿದೆ. ಧಾರವಾಡ, ಹಾಸನ, ಚಿಂತಾಮಣಿಗಳಲ್ಲಿ 13 ಡಿಗ್ರಿ ಸೆಲ್ಸಿಯಸ್‌, ದಾವಣಗೆರೆ, ಚಿತ್ರದುರ್ಗ, ಗದಗ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಲಾ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೀದರ್‌ನಲ್ಲಿ ಗುರುವಾರ 11.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ರಾಜ್ಯದಲ್ಲಿ ಈ ತಿಂಗಳಲ್ಲೇ ಅತ್ಯಂತ ಕಡಿಮೆ ತಾಪಮಾನ. ಬೆಳಗಾವಿ ವಿಮಾನ ನಿಲ್ದಾಣದಲ್ಲಿಡಿ.9ರಂದು 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.

ADVERTISEMENT

ಬೆಂಗಳೂರಿನಲ್ಲಿ ಗುರುವಾರ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ನಗರದಲ್ಲಿ ಡಿಸೆಂಬರ್‌ನಲ್ಲಿ ಈವರೆಗೆ ದಾಖಲಾಗಿರುವ ಕನಿಷ್ಠ ತಾಪಮಾನವಿದು. 2020ರ ಡಿಸೆಂಬರ್‌ನಲ್ಲಿ ಒಮ್ಮೆ 14 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇದು ಕಳೆದ ಡಿಸೆಂಬರ್‌ನಲ್ಲಿ ದಾಖಲಾಗಿದ್ದ ಅತಿ ಕಡಿಮೆ ತಾಪಮಾನ.

ಈ ವಾರದಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಪ್ರಮಾಣವೂ ಕ್ಷೀಣಿಸಿದೆ. ಶುಭ್ರವಾದ ಆಕಾಶ ಇರುವುದರಿಂದ ರಾತ್ರಿ ಸಮಯದಲ್ಲಿ ತಾಪಮಾನ ಮತ್ತಷ್ಟು ಕುಸಿದು, ಮುಂಜಾನೆ‌ದಟ್ಟವಾದ ಮಂಜು ಆವರಿಸುತ್ತಿದೆ.

‘ತೇವಾಂಶ ತರುವ ಮಾರುತಗಳು ಸಂಪೂರ್ಣವಾಗಿ ನಿಂತು, ಉತ್ತರ ಮತ್ತು ಈಶಾನ್ಯ ಮಾರುತಗಳುರಾಜ್ಯದತ್ತ ಬೀಸುತ್ತಿವೆ. ಹಾಗಾಗಿ, ಒಣಹವೆ ಮುಂದುವರಿದು ಹವಾಮಾನದಲ್ಲಿ ಏರಿಳಿತ ಕಂಡು ಬಂದಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಇದ್ದು, ಮಳೆಯ ಯಾವುದೇ ಸೂಚನೆಗಳಿಲ್ಲ. ಮೋಡಗಳಿಲ್ಲ ಶುಭ್ರ ಆಕಾಶದಿಂದಾಗಿ ರಾತ್ರಿಯಿಂದಲೇ ತಾಪಮಾನ ಕಡಿಮೆಯಾಗಿ ಥರಗುಟ್ಟುವ ಚಳಿಯಾಗುತ್ತಿದೆ. ಈ ವೈಪರೀತ್ಯದಿಂದ ಮುಂಜಾನೆ ದಟ್ಟವಾದ ಮಂಜು ಆವರಿಸಿ ಗೋಚರತೆಯೂ ಕ್ಷೀಣಿಸುತ್ತಿದೆ’ ಎಂದು ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ವಿವರಿಸಿದರು.‌

‘ಕಳೆದ ವಾರವಿಡೀ ಕನಿಷ್ಠ ತಾಪಮಾನ ಸ್ಥಿರವಾಗಿತ್ತು. ಮೂರು ದಿನಗಳಿಂದ ತಾಪಮಾನ ಕ್ಷೀಣಿಸುತ್ತಿದೆ. ಚಳಿ ಹೆಚ್ಚಾಗಲು ಇದೂ ಕಾರಣ. ಮುಂದಿನ ದಿನಗಳಲ್ಲಿ ಚಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.