‘ಇ–ಸ್ವತ್ತು
ಬೆಂಗಳೂರು: ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ–ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಪರಿಹಾರ ಸೂಚಿಸಲು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ 12 ಸದಸ್ಯರ ಸಮಿತಿಯನ್ನು ನೇಮಿಸಿ ಪಂಚಾಯತ್ ರಾಜ್ ಆಯುಕ್ತೆ ಅರುಂಧತಿ ಚಂದ್ರಶೇಖರ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಇ–ಸ್ವತ್ತು ಮತ್ತು ಗ್ರಾಮೀಣ ಆಸ್ತಿಗಳ ತೆರಿಗೆ ನಿಗದಿಗೆ ಸಂಬಂಧಿಸಿದ ವಿಷಯ ತಜ್ಞರೂ ಆಗಿರುವ ಪಂಚಾಯತ್ ರಾಜ್ ಆಯುಕ್ತಾಲಯದ ನಿವೃತ್ತ ಉಪ ನಿರ್ದೇಶಕ ಕೆ.ಜಿ. ಜಗದೀಶ ಅವರನ್ನು ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಗಿದೆ.
ಪಂಚಾಯತ್ ರಾಜ್ ಆಯುಕ್ತಾಲಯದ ಅಭಿವೃದ್ಧಿ ವಿಭಾಗದ ನಿರ್ದೇಶಕರು, ವಿಜಯಪುರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯ ಅಜೂರೆ, ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಶಿವಶಂಕರ್ ಪಿ., ಶಹಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು ಶರಬಯ್ಯ, ನ್ಯಾಮತಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಆಶಾ ಎಂ.ಜೆ., ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ದರಾಜು, ಖಾನಾಪುರ ತಾಲ್ಲೂಕಿನ ಶಿಂಧೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ಎನ್.ಭಟ್., ಚಿಕ್ಕಮಗಳೂರು ತಾಲ್ಲೂಕಿನ ಕೆ.ಬಿ.ಹಾಳ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಾಲುಕ್ಯ ಭಾರವಿ ಮತ್ತು ಕಡಬ ತಾಲ್ಲೂಕಿನ ಶಿರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತ ಬೆಳ್ಚಡ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪಂಚಾಯತ್ ರಾಜ್ ಆಯುಕ್ತಾಲಯದ ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ–1993ರ ಸೆಕ್ಷನ್ 199ಕ್ಕೆ ಇ–ಸ್ವತ್ತು ವಿಷಯಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ತರಲು ಸಮಿತಿ ಸಲಹೆಗಳನ್ನು ನೀಡಬೇಕಿದೆ. ಇ–ಸ್ವತ್ತು ವಿತರಣೆಯಲ್ಲಿನ ಸಮಸ್ಯೆಗಳನ್ನು ಅಧ್ಯಯನ ನಡೆಸಿ, ಪರಿಹಾರ ಸೂಚಿಸಬೇಕು. ಇ–ಸ್ವತ್ತು ತಂತ್ರಾಂಶದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದಕ್ಕೂ ಈ ಸಮಿತಿ ಸಲಹೆ ನೀಡಬೇಕಿದೆ. ವರದಿ ಸಲ್ಲಿಸಲು ಎರಡು ತಿಂಗಳ ಗಡುವು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.