ADVERTISEMENT

ಲೂಟಿ ಮಾಡಲು ಪರವಾನಗಿ ನೀಡಿರುವ ಸರ್ಕಾರ: ಕೆ.ಎನ್‌.ಉಮೇಶ್‌

​ಪ್ರಜಾವಾಣಿ ವಾರ್ತೆ
Published 25 ಮೇ 2021, 16:33 IST
Last Updated 25 ಮೇ 2021, 16:33 IST

ಬೆಂಗಳೂರು: ‘ಕೋವಿಡ್‌ ಲಸಿಕೆ ದರ ನಿಯಂತ್ರಿಸುವುದು ಅಸಾಧ್ಯ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ. ಅವರ ಮಾತು ರಾಜ್ಯ ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಂತಿದೆ. ಲಸಿಕೆ ದರ ನಿಯಂತ್ರಣ ಮಾಡಲು ಆಗದಿದ್ದ ಮೇಲೆ ಸರ್ಕಾರ ಏಕಿರಬೇಕು’ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ಪ್ರಶ್ನಿಸಿದ್ದಾರೆ.

‘ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈಗ ಕೊರತೆಯ ನೆಪ ಮುಂದಿಟ್ಟು ಜನರನ್ನು ಖಾಸಗಿ ಆಸ್ಪತ್ರೆಗಳಲ್ಲಿನ ಪಾವತಿ ವ್ಯವಸ್ಥೆಗೆ ದೂಡಿದೆ. ಖಾಸಗಿ ಆಸ್ಪತ್ರೆಯವರು ಪ್ರತಿ ಡೋಸ್‌ಗೆ₹1,300 ಹಣ ಪಡೆಯುತ್ತಿದ್ದಾರೆ. ಇದನ್ನು ತಡೆಯೋದು ಕಷ್ಟ ಎಂದು ಸಚಿವರು ಹೇಳುತ್ತಿದ್ದಾರೆ. ಆ ಮೂಲಕ ಸರ್ಕಾರ ಲೂಟಿಗೆ ರಹದಾರಿ ಮಾಡಿಕೊಟ್ಟಿದೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯ ಸರ್ಕಾರಕ್ಕೆ ಲಭ್ಯವಾಗದ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ಎಲ್ಲಿಂದ ಬರುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ವಿವರಣೆ ನೀಡಬೇಕು.18 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆಯನ್ನು ಉಚಿತವಾಗಿ ಕೊಡುವುದಾಗಿ ಮುಖ್ಯಮಂತ್ರಿಯವರೇ ಘೋಷಿಸಿದ್ದರು. ಆದರೆ ಈಗ ಇದನ್ನು ಮುಂದೂಡುತ್ತಲೇ ಹೋಗುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿಯದೆ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್‌.ಪ್ರತಾಪ ಸಿಂಹ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.